ಖ್ಯಾತ ನಿರ್ದೇಶಕ ಮಠ ಗುರುಪ್ರಸಾದ್ ಅವರನ್ನು ಗಿರಿನಗರ ಪೊಲೀಸರು ಬಂಧಿಸಿ, ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಚೆಕ್ ಬೌನ್ಸ್ ಪ್ರಕರಣದಲ್ಲಿ ಡೈರೆಕ್ಟರ್ ಗುರುಪ್ರಸಾದ್ ವಿರುದ್ಧ ಶ್ರೀನಿವಾಸ್ ಎಂಬುವವರು ದೂರು ಕೊಟ್ಟಿದ್ದರು. 2015ರಲ್ಲಿ ಗುರು ಪ್ರಸಾದ್ 30 ಲಕ್ಷ ರೂ. ಸಾಲ ಪಡೆದಿದ್ದು, ಚೆಕ್ ಕೊಟ್ಟಿದ್ದರು. ಆದರೆ ಆ ಚೆಕ್ ಬೌನ್ಸ್ ಆಗಿತ್ತು. ಇತ್ತ ಸಾಲವನ್ನೂ ವಾಪಸ್ ಕೊಡದಿದ್ದ ಹಿನ್ನೆಲೆಯಲ್ಲಿ ಶ್ರೀನಿವಾಸ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಅತ್ತ ವಿಚಾರಣೆಗೂ ಗುರುಪ್ರಸಾದ್ ಬಾರದಿದ್ದ ಹಿನ್ನೆಲೆ ಜಾಮೀನು ರಹಿತ ವಾರೆಂಟ್ ಜಾರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಗುರುಪ್ರಸಾದ್ ಅವರನ್ನು ಬಂಧಿಸಿ 21ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನಂತರ ಶ್ಯೂರಿಟಿ ಮೇಲೆ ಜಾಮೀನು ನೀಡಿರುವ ಕೋರ್ಟ್, ವಿಚಾರಣೆಗೆ ತಪ್ಪದೇ ಹಾಜರಾಗಬೇಕು ಎಂದು ಸೂಚಿಸಿದೆ. ಅರೆಸ್ಟ್ ಆದ ಮೂರು ಗಂಟೆಗಳಲ್ಲಿ ಗುರು ಪ್ರಸಾದ್ ಬಿಡುಗಡೆಯಾಗಿದ್ದಾರೆ.
ಗುರುಪ್ರಸಾದ್ ನನ್ನ ಗುರುಗಳು. ಈಗಲೂ ಅವರು 30 ಲಕ್ಷ ರೂ. ವಾಪಸ್ ಕೊಟ್ಟರೆ ಕೇಸ್ ವಾಪಸ್ ಪಡೆಯುತ್ತೇನೆ. 30 ಲಕ್ಷವನ್ನು ಬೇರೊಬ್ಬರಿಂದ ಸಾಲ ಕೊಡಿಸಿದ್ದೆ. ಇವರು ಕೊಡದೇ ಇದ್ದ ಕಾರಣ ನಾನು ನನ್ನ ಹೆಂಡತಿಯ ಒಡವೆಗಳನ್ನೆಲ್ಲ ಮಾರಿ, ಸಾಲ ಮಾಡಿ, ಬ್ಯಾಂಕ್ ಲೋನ್ ಪಡೆದುಕೊಂಡು ಸಾಲ ತೀರಿಸಿದ್ದೇನೆ. ಇನ್ನೂ ತೀರಿಸುತ್ತಿದ್ದೇನೆ. ಬಡ್ಡಿ ಕಟ್ಟುತ್ತಿದ್ದೇನೆ ಎಂದಿದ್ದಾರೆ ದೂರುದಾರ ಶ್ರೀನಿವಾಸ್.