13 ವರ್ಷಗಳ ಬಳಿಕ ಡಾ.ವಿಷ್ಣುವರ್ಧನ್ ಅವರ ಸ್ಮಾರಕಕ್ಕೆ ಕಾಲ ಕೂಡಿ ಬಂದಿದೆ. ಹಾಲಾಳು ಗ್ರಾಮದಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಪ್ರಕ್ರಿಯೆ ಪೂರ್ಣಗೊಂಡಿದ್ದು ಜನವರಿ 29ರಂದು ಸ್ಮಾರಕ ಉದ್ಘಾಟನೆಯಾಗಲಿದೆ. ಜನವರಿ 29ರಂದು ಬೆಳಗ್ಗೆ 11 ಗಂಟೆಗೆ ಸರಿಯಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಮಾರಕ ಉದ್ಘಾಟನೆ ಮಾಡಲಿದ್ದಾರೆ.
ಮೈಸೂರಿನ ಹಾಲಾಳು ಗ್ರಾಮದಲ್ಲಿ ಸರ್ಕಾರ ಸ್ಮಾರಕ ನಿರ್ಮಾಣಕ್ಕೆ 5 ಎಕರೆ ಭೂಮಿ ನೀಡಿತ್ತು. ಭೂಮಿ ವ್ಯಾಜ್ಯ ಇಲ್ಲದೇ ಹೋಗಿದ್ದರೆ ಇಷ್ಟು ಹೊತ್ತಿಗೆ ನಿರ್ಮಾಣ ಕಾರ್ಯವೂ ಆಗುತ್ತಿತ್ತು. ಕೊನೆಗೂ ಎಲ್ಲ ಕಾನೂನು ಹೋರಾಟ ಮುಗಿಸಿ ಸ್ಮಾರಕ ನಿರ್ಮಾಣ ಪೂರ್ಣಗೊಂಡಿದೆ. 5 ಎಕರೆ ಪ್ರದೇಶದಲ್ಲಿ 3 ಎಕರೆ ಜಾಗದಲ್ಲಿ ಸ್ಮಾರಕ ನಿರ್ಮಾಣ ಮಾಡಲಾಗಿದೆ ಎಂದು ಅನಿರುದ್ಧ ಅವರು ಮಾಹಿತಿ ನೀಡಿದ್ದಾರೆ.
ಸ್ಮಾರಕದಲ್ಲಿ ವಿಷ್ಣುವರ್ಧನ್ ಅವರ 600 ಅಪರೂಪದ ಚಿತ್ರಗಳು, ವಿಷ್ಣುವರ್ಧನ್ ಬಳುಸುತ್ತಿದ್ದ ವಸ್ತುಗಳು ಪ್ರದರ್ಶನಕ್ಕೆ ಇರಲಿವೆ. ಸ್ಮಾರಕದ ಎದುರು ವಿಭೂತಿ ಧಾರಿಯಾಗಿರುವ ವಿಷ್ಣುವರ್ಧನ್ ಅವರ 7 ಅಡಿ ಎತ್ತರದ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ಸ್ಮಾರಕದಲ್ಲಿ ಒಂದು ಸಭಾಂಗಣವಿದ್ದು, ಇಲ್ಲಿ ನಾಟಕ ಹಾಗೂ ಸಿನಿಮಾಗಳ ಪ್ರದರ್ಶನಕೆಕ ಅವಕಾಶವಿದೆ. ಜೊತೆಗೆ ರಂಗ ತರಬೇತಿ ಕೇಂದ್ರವೂ ಇರಲಿದೆ. ಸಭಾಂಗಣದಲ್ಲಿಯೇ ಕಚೇರಿ ಹಾಗೂ ಎರಡು ಕೊಠಡಿಗಳ ನಿರ್ಮಾಣ ಮಾಡಲಾಗಿದೆ ಎಂದು ಅಳಿಯ ಹಾಗೂ ನಟ ಅನಿರುದ್ಧ ಮಾಹಿತಿ ನೀಡಿದ್ದಾರೆ. ಜೊತೆಗೆ ವಾಹನಗಳ ಪಾರ್ಕಿಂಗ್, ಸುಸಜ್ಜಿತ ಶೌಚಾಲಯಗಳು, ಕ್ಲಾಸ್ ರೂಂ, ಕ್ಯಾಂಟೀನ್, ಸುಂದರವಾದ ಕಾರಂಜಿ, ಹಸಿರಿನಿಂದ ಕಂಗೊಳಿಸುವ ಪಾರ್ಕ್ ಎಲ್ಲವೂ ಇರಲಿದೆ.
ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆ ನಡೆದಿದ್ದು ಅಭಿಮಾನ್ ಸ್ಟುಡಿಯೋದಲ್ಲಿ. ಆದರೆ ಹಲವು ಕಾರಣಗಳಿಂದ ಅದು ಈಡೇರಲಿಲ್ಲ. ವಿವಾದ ತಾರಕಕ್ಕೇರಿ ಭಾರತಿ ಮತ್ತು ವಿಷ್ಣುವರ್ಧನ್ ಅಭಿಮಾನಿಗಳ ನಡುವಿನ ಸಂಘರ್ಷಕ್ಕೂ ಕಾರಣವಾಗಿತ್ತು. ಸಿದ್ದರಾಮಯ್ಯ ಸರ್ಕಾರವಿದ್ದಾಗ ಖುದ್ದು ಸುದೀಪ್ ಸೇರಿದಂತೆ ಚಿತ್ರರಂಗದ ಹಲವು ಹಿರಿಯರು ಈ ಬಗ್ಗೆ ಪ್ರಯತ್ನ ನಡೆಸಿದ್ದರು. ಕೊನೆಗೆ ಭಾರತಿ ವಿಷ್ಣುವರ್ಧನ್ ಆಗ್ರಹಕ್ಕೆ ಮಣಿದ ಸರ್ಕಾರ ಮೈಸೂರಿನ ಹಾಲಾಳು ಗ್ರಾಮದಲ್ಲಿ 5 ಎಕರೆ ಜಮೀನು ನೀಡಿದ್ದರು. ಅಲ್ಲಿಯೂ ಸಮಸ್ಯೆ ಶುರುವಾದಾಗ ಜಮೀನು ನೀಡಿದ್ದ ಸಿಎಂ ಆಗಿದ್ದ ಯಡಿಯೂರಪ್ಪನವರೇ ವಿವಾದ ಬಗೆಹರಿಸಿದ್ದರು. ಈಗ ಬೊಮ್ಮಾಯಿ ಆಗಿದ್ದಾರೆ. ಅವರಿಂದಲೇ ಸ್ಮಾರಕ ಉದ್ಘಾಟನೆಗೊಳ್ಳುತ್ತಿದೆ.