ಚಿತ್ರ ಹಾಗೂ ಪಾತ್ರಕ್ಕಾಗಿ ತೂಕ ಹೆಚ್ಚಿಸಿಕೊಳ್ಳೋದು ಮತ್ತು ಇಳಿಸಿಕೊಳ್ಳೋ ಸಂಪ್ರದಾಯ ಶುರುವಾಗಿದ್ದು ನಟ ಕಮಲ್ ಹಾಸನ್ ಅವರಿಂದ. ಅದಾದ ಮೇಲೆ ಘಜನಿ, ದಂಗಲ್ ಚಿತ್ರಗಳಿಗಾಗಿ ಅಮೀರ್ ಖಾನ್, ಐ ಚಿತ್ರಕ್ಕಾಗಿ ವಿಕ್ರಂ, ಬಾಹುಬಲಿಗಾಗಿ ಪ್ರಭಾಸ್, ರಾಣಾ ದಗ್ಗುಬಾಟಿ, ನಟಿಯರಲ್ಲಿ ಝೀರೋ ಸೈಝ್ ಚಿತ್ರಕ್ಕಾಗಿ ಅನುಷ್ಕಾ ಶೆಟ್ಟಿ, ಡರ್ಟಿ ಪಿಕ್ಚರ್ ಚಿತ್ರಕ್ಕಾಗಿ ವಿದ್ಯಾ ಬಾಲನ್.. ಹೀಗೆ ಹಲವರು ತೂಕ ಹೆಚ್ಚಿಸಿಕೊಂಡು ನಟಿಸಿದ್ದಾರೆ. ಇದೇ ಅಮೀರ್ ಖಾನ್ ಪಿಕೆ, ಲಾಲ್ ಸಿಂಗ್ ಚಡ್ಡಾ ಚಿತ್ರಕ್ಕಾಗಿ, ಸುದೀಪ್ ಮುಸ್ಸಂಜೆ ಮಾತು ಚಿತ್ರಕ್ಕಾಗಿ ತೆಳ್ಳಗೂ ಆಗಿದ್ದಾರೆ.
ಧ್ರುವ ಸರ್ಜಾ ಕೂಡಾ ಪೊಗರು ಚಿತ್ರಕ್ಕಾಗಿ ದೇಹದ ತೂಕ ಹೆಚ್ಚಿಸಿಕೊಂಡಿದ್ದಾರೆ. ಬೈಸಪ್ಸ್ ಎಗರೆಗರಿ ಬೀಳುವಂತೆ ಕಟ್ಟುಮಸ್ತಾಗಿಸಿದ್ದರು. ಅದೇ ಚಿತ್ರದಲ್ಲಿ ತೂಕ ಇಳಿಸಿಕೊಂಡು ಸಣ್ಣದಾಗಿಯೂ ನಟಿಸಿದ್ದರು. ಮಾರ್ಟಿನ್ ಚಿತ್ರದ ಪಾತ್ರಕ್ಕೆ ಅದೇ ದೇಹವನ್ನು ತುಸು ಇಳಿಸಿಕೊಂಡಿದ್ದರು. ಇದೀಗ ಮತ್ತೆ ಕೆಡಿ ಚಿತ್ರಕ್ಕಾಗಿ ತೂಕ ಇಳಿಸಿಕೊಂಡಿದ್ದಾರೆ. ಅದೂ 30 ದಿನಗಳಲ್ಲಿ 18 ಕೆಜಿ ಇಳಿಸಿಕೊಂಡಿದ್ದಾರೆ.
30 ದಿನಗಳಲ್ಲಿ 18 ಕೆಜಿ ತೂಕ ಕಡಿಮೆ ಮಾಡಿಕೊಳ್ಳೋದು ಸುಮ್ಮನೆ ಮಾತಲ್ಲ. ಆದರೆ ಇದು ಹೆಮ್ಮೆ ಪಡುವ ವಿಷಯವಂತೂ ಖಂಡಿತಾ ಅಲ್ಲ. ಸೈಡ್ ಎಫೆಕ್ಟ್ ಜಾಸ್ತಿ. ಡೆಡಿಕೇಷನ್ ಮೆಚ್ಚಬಹುದಾದರೂ ದೇಹದ ಮೇಲೆ ವಿಪರೀತ ಒತ್ತಡ ಹಾಕುವುದು ಯಾವತ್ತಿಗೂ ಅಪಾಯ. ಏನೇ ಫಿಟ್‍ನೆಸ್ ಇದ್ದರೂ, ಪ್ರತಿದಿನ ಕಸರತ್ತು ಮಾಡಿದರೂ ದೇಹ ಎಲ್ಲವನ್ನೂ ತಡೆದುಕೊಳ್ಳಲ್ಲ. ಧ್ರುವ ಸರ್ಜಾ ಈ ರೀತಿ ತೂಕ ಇಳಿಸಿಕೊಂಡೆ ಎಂದು ಎಂದು ಪೋಸ್ಟ್ ಹಾಕಿದ್ದೇ ತಡ, ಅಭಿಮಾನಿಗಳು ಮೆಚ್ಚುಗೆಯ ಜೊತೆ ಜೊತೆಗೆ ಎಚ್ಚರಿಕೆ ಮಾತನ್ನೂ ಹೇಳಿದ್ದಾರೆ. ಪ್ರೀತಿ ಜೊತೆ ಕಾಳಜಿ ತೋರಿಸಿದ್ದಾರೆ. ಅಭಿಮಾನಿಗಳ ಆತಂಕ ಏಕೆ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ.
ಧ್ರುವ ಸರ್ಜಾ ಈ ರೀತಿ ತೂಕ ಇಳಿಸಿಕೊಂಡಿರೋದು ಕೆಡಿ ಚಿತ್ರಕ್ಕಾಗಿ. ಪ್ರೇಮ್ ನಿರ್ದೇಶನದ ಚಿತ್ರದಲ್ಲಿ ಸಂಜಯ್ ದತ್, ರವಿಚಂದ್ರನ್, ರಮೇಶ್ ಅರವಿಂದ್ ನಟಿಸುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದಲ್ಲಿ ಮೂಡಿ ಬರುತ್ತಿರೋ ಚಿತ್ರವಿದು.