ನಮ್ಮಿಬ್ಬರ ಪ್ರೀತಿ ಶುರುವಾಗಿದ್ದು ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದಿಂದ. ಗೋಧಿ ಬಣ್ಣ ಸಾಧಾರಣ ಮೈಕಟ್ಟು ನೋಡಿದ ಹರಿಪ್ರಿಯಾ ಅವರಿಗೆ ವಸಿಷ್ಠ ಸಿಂಹ ಅವರ ಪಾತ್ರ ಇಷ್ಟವಾಯಿತು. ನಟನೆ ಇಷ್ಟವಾಯಿತು. ವಿಷ್ ಮಾಡಿದ್ರು. ಫೋನ್ ಮಾಡಿದ್ರು. ಮತ್ತೆ ಮತ್ತೆ ಫೋನ್ ಮಾಡ್ತಾ ಹೋದ್ರು. ಮಾತನಾಡ್ತಾ ಹೋದ್ರು. ಮಧ್ಯೆ ಕೊರೊನಾ ಬಂತು. ಸಿಕ್ಕಾಪಟ್ಟೆ ಬಿಡುವು ಸಿಕ್ಕಿತು. ಇಷ್ಟು ಸುದೀರ್ಘ ಮಾತುಕತೆಯ ಮಧ್ಯೆ ಇಬ್ಬರ ಮಧ್ಯೆ ಪ್ರೀತಿ ಶುರುವಾಗಿದ್ದು ಹೇಗೆ..? ಇಬ್ಬರಿಗೂ ಗೊತ್ತಿಲ್ಲ.
ಜನವರಿ 26ರಂದು ಮೈಸೂರಿನಲ್ಲಿ ಮದುವೆಯಾಗುತ್ತಿರುವ ಹಿನ್ನೆಲೆ, ಸಿಂಹ ಪ್ರಿಯಾ ಜೋಡಿ ಪ್ರೆಸ್ ಮೀಟ್ ಕರೆದಿತ್ತು. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ವಸಿಷ್ಠ ಸಿಂಹ ನಾನು ನಾಯಿಮರಿ ಕೊಟ್ಟು ಪಟಾಯಿಸಿಕೊಳ್ಳಲಿಲ್ಲ ಎಂಬ ಯೂಟ್ಯೂಬರ್ಸ್ ಕಾಲ್ಪನಿಕ ವರದಿಗಳನ್ನು ಚೇಡಿಸುತ್ತಲೇ ಪ್ರೀತಿ ಆದ ಮೇಲೆ ನಾಯಿಮರಿ ಕೊಟ್ಟೆ ಎಂದರು. ನನಗೆ ಮೈಸೂರು ಇಷ್ಟ. ಮೈಸೂರಿನ ಹುಡುಗ. ಹೀಗಾಗಿ ಮೈಸೂರಿನಲ್ಲಿಯೇ ಮದುವೆಯಾಗುತ್ತಿದ್ದೇವೆ. ಬೆಂಗಳೂರಿನಲ್ಲಿ ಆರತಕ್ಷತೆ ಇದೆ ಎಂದರು. ಹರಿಪ್ರಿಯಾ ಅವರಿಗೆ ವಸಿಷ್ಠ ಸಿಂಹ ಫ್ಯಾನ್ ಅಂತೆ. ಮನಸುಗಳ ಮಾತು ಮಧುರ ನೋಡಿ ನಟನೆಯನ್ನು ಇಷ್ಟಪಟ್ಟೆ. ಉಗ್ರಂ ಚಿತ್ರ ನೋಡಿ ಅವರ ಅಭಿಮಾನಿಯಾದೆ. ಸೂಜಿದಾರ ಸಿನಿಮಾ ನೋಡಿ ಕಳೆದೇ ಹೋಗ್ಬಿಟ್ಟೆ. ಅವರ ಟ್ಯಾಲೆಂಟ್ ಇಷ್ಟವಾಯಿತು. ನನ್ನ ಕಷ್ಟದ ದಿನಗಳಲ್ಲಿ ಅವರು ನನ್ನ ಜೊತೆಗಿದ್ದರು. ನಮ್ಮಿಬ್ಬರದೂ ಎರಡೂವರೆಮೂರು ವರ್ಷದ ಪ್ರೀತಿ ಎನ್ನುವ ವಸಿಷ್ಠ ಸಿಂಹ ಮೊದಲು ಪ್ರಪೋಸ್ ಮಾಡಿದ್ದು ನಾನೇ ಎಂದರು.
ನಮ್ಮಿಬ್ಬರ ಪ್ರೀತಿ ಹೆಚ್ಚಾಗಿದ್ದು ಲಾಕ್ ಡೌನ್ ಕಾಲದಲ್ಲಿ. ಸಿಂಹ ನನಗೆ ಪ್ರಪೋಸ್ ಮಾಡಿದ್ದು ಅಪ್ಪ ತೀರಿ ಹೋದ ದಿನ. ನನಗೂ ಹೇಳಿಕೊಳ್ಳೋ ಆಸೆ ಇತ್ತು. ಮದುವೆ ಆದ ಮೇಲೆ ಸಿನಿಮಾವನ್ನೇನೂ ಬಿಡಲ್ಲ. ಆದರೆ ಬ್ರೇಕ್ ತೆಗೆದುಕೊಳ್ತೇನೆ. ಮದುವೆ, ಮ್ಯಾರೇಜ್ ಲೈಫ್‍ನ್ನ ಎಂಜಾಯ್ ಮಾಡಬೇಕು. ಆನಂತರ ಒಳ್ಳೆಯ ಕಥೆ, ಪಾತ್ರ ಸಿಕ್ಕರೆ ನಟಿಸುತ್ತೇನೆ ಎಂದರು ಹರಿಪ್ರಿಯಾ. ಜನವರಿ 26ಕ್ಕೆ ಮದುವೆ, ಮೈಸೂರಿನಲ್ಲಿ. ಜನವರಿ 28ಕ್ಕೆ ಆರತಕ್ಷತೆ, ಬೆಂಗಳೂರಿನಲ್ಲಿ.