ಅವರಿಬ್ಬರೂ ಪಬ್ಬಿಗೆ ಬರುತ್ತಾರೆ. ಅವನಿಗೆ ಮದುವೆ, ಪ್ರೀತಿ, ಸಂಸಾರ, ಜವಾಬ್ದಾರಿಗಳಾವ್ಯಾವುವೂ ಇಷ್ಟವಿಲ್ಲ. ಆದರೆ ವೃತ್ತಿ ಮದುವೆ ಮಾಡಿಸುವುದು. ಮ್ಯಾರೇಜ್ ಆರ್ಗನೈಸರ್. ಅವಳೂ ಪಬ್ಬಿಗೆ ಬರುತ್ತಾಳೆ. ಅವಳಿಗೂ ಅಷ್ಟೆ. ಪ್ರೀತಿ, ಮದುವೆಯನ್ನೇ ದ್ವೇಷಿಸುವವಳು. ಇಬ್ಬರೂ ಪಬ್ಬಿನಲ್ಲಿ ಜೊತೆಯಾಗಿ ಮತ್ತಿನಲ್ಲಿ ಒಂದು ಎಡವಟ್ಟು ಮಾಡುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಸೆಲ್ಫೀ ತೆಗೆದುಕೊಂಡು ನಾವಿಬ್ಬರೂ ಕಪಲ್ ಎಂದು ಅನೌನ್ಸ್ ಮಾಡಿಬಿಡುತ್ತಾರೆ. ಮತ್ತೆಲ್ಲ ಇಳಿದು ಬೆಳಗ್ಗೆ ಎದ್ದ ಮೇಲೆ ನಮ್ಮಿಬ್ಬರಿಗೂ ಪರಿಚಯವೇ ಇಲ್ಲ. ಹೆಸರೂ ಕೂಡಾ ಗೊತ್ತಿಲ್ಲ ಎಂದು ಅರಿವಾಗುತ್ತೆ. ಅಲ್ಲಿಂದ ಶುರುವಾಗುತ್ತೆ ಭಾವನೆಗಳ ಸವಾರಿ..
ಇದು ಶುಗರ್ ಫ್ಯಾಕ್ಟರಿ ಚಿತ್ರದ ಒನ್ ಲೈನ್ ಸ್ಟೋರಿ. ಹೀರೋ ಡಾರ್ಲಿಂಗ್ ಕೃಷ್ಣ. ಹೀರೋಯಿನ್ ಸೋನಲ್ ಮಂಥೆರೋ. ರಂಗಾಯಣ ರಘು, ಅದ್ವಿತಿ ಶೆಟ್ಟಿ, ಶಿಲ್ಪಾ ಶೆಟ್ಟಿ, ಶಿಲ್ಪಾ, ಪವನ್ ನಾರಾಯಣ್, ಗೋವಿಂದೇ ಗೌಡ.. ಹೀಗೆ ದೊಡ್ಡ ಕಲಾವಿದರ ದಂಡೇ ಚಿತ್ರದಲ್ಲಿದೆ. ನಿರ್ದೇಶಕ ದೀಪಕ್ ಅರಸ್ ದಶಕದ ಗ್ಯಾಪ್ ನಂತರ ಚಿತ್ರ ನಿರ್ದೇಶನಕ್ಕಿಳಿದಿದ್ದಾರೆ. ಆದರೆ ಇಡೀ ಚಿತ್ರದ ಕಥೆ ಈಗಿನ ಯೂಥ್ ಟ್ರೆಂಡ್ ಪಬ್ ಲೈಫ್ ಕುರಿತಾದದ್ದು. ಇಡೀ ಚಿತ್ರವನ್ನು ಏಷ್ಯಾದ ನಂ.1 ಪಬ್ಬಿನಲ್ಲಿ ಚಿತ್ರೀಕರಣ ಮಾಡಲಾಗಿದೆ. 27 ದಿನಗಳ ಕಾಲ ಚಿತ್ರೀಕರಣ. ಗೋವಾದಲ್ಲಿ 22 ದಿನ ಶೂಟಿಗ್. ಪ್ರತಿ ದೃಶ್ಯವೂ ರಿಚ್ ಆಗಿ ಬಂದಿದೆ ಎನ್ನುತ್ತಾರೆ ದೀಪಕ್ ಅರಸ್.
2011ರಲ್ಲಿ ಮನಸಾಲಜಿ ಚಿತ್ರ ನಿರ್ದೇಶಿಸಿದ್ದವರು ದೀಪಕ್ ಅರಸ್. ಶುಗರ್ ಫ್ಯಾಕ್ಟರಿಯಲ್ಲಿ ಒಟ್ಟು 7 ಹಾಡುಗಳಿವೆ. ಕಬೀರ್ ರಫಿ ಅದ್ಭುತ ಸಂಗೀತ ಸಂಯೋಜನೆ ಮಾಡಿದ್ದಾರೆ. ಪಬ್ ಆ್ಯಂಥಮ್ ಗೀತೆಯೊಂದನ್ನು ಚಂದನ್ ಶೆಟ್ಟಿ ಹಾಡಿದ್ದು ಹಾಡು ಹಿಟ್ ಆಗಿದೆ. ಇದೇ ಫೆಬ್ರವರಿ 10ರಂದು ಚಿತ್ರ ರಿಲೀಸ್ ಆಗುತ್ತಿದೆ.