ಈ ಬಾರಿಯ ಆಸ್ಕರ್‍ನಲ್ಲಿ ಕನ್ನಡ ಚಿತ್ರಗಳ ಹೊಳಪು ಜೋರಾಗಿದೆ. ಕಾಂತಾರ ಹಾಗೂ ವಿಕ್ರಾಂತ್ ರೋಣ ಚಿತ್ರಗಳು ಮೊದಲ ಸುತ್ತಿನ ಅರ್ಹತೆ ದಾಟಿದ್ದು 301 ಚಿತ್ರಗಳ ಲಿಸ್ಟ್ ಸೇರಿವೆ. ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಅತ್ಯುತ್ತಮ ಚಿತ್ರ ಹಾಗೂ ನಟ ಎರಡು ವಿಭಾಗಗಳಲ್ಲಿ ಪ್ರಶಸ್ತಿ ಸುತ್ತು ತಲುಪಿದೆ ಎನ್ನಲಾಗಿದೆ. ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಕೂಡಾ ನಟನೆ ವಿಭಾಗದಲ್ಲಿಯೇ ಅರ್ಹತೆ ಗಿಟ್ಟಿಸಿದೆ.
ರಾಜಮೌಳಿ ಅವರ ಆರ್.ಆರ್.ಆರ್. , ಅಲಿಯಾ ಭಟ್ ಅಭಿನಯದ ಗಂಗೂಬಾಯಿ ಕಟವಾಡಿ ಚಿತ್ರಗಳೂ ಅರ್ಹತೆಯ ಸುತ್ತು ದಾಟಿವೆ. ಹಿಂದಿಯಲ್ಲಿ ಸಂಚಲನ ಸೃಷ್ಟಿಸಿದ್ದ ಕಾಶ್ಮೀರ್ ಫೈಲ್ಸ್, ಮಾಧವನ್ ನಟನೆಯ ವಿಜ್ಞಾನಿ ನಂಬಿಯಾರ್ ಬಯೋಪಿಕ್ ರಾಕೆಟ್ರಿ : ದಿ ನಂಬಿ ಎಫೆಕ್ಟ್ ಕೂಡಾ ಆಯ್ಕೆಯಾಗಿವೆ. ತಮಿಳಿನ ಇರವಿನ್ ನಿಜಳ್, ಮಿ.ವಸಂತ ರಾವ್, ದಿ ಕನೆಕ್ಟ್ ಮಾರ್ನಿಂಗ್, ತುಝ್ಕಾ ಸಾಥಿ ಕೀ ನಹೀ ಚಿತ್ರಗಳೂ ಅರ್ಹತಾ ಸುತ್ತು ಪ್ರವೇಶಿಸಿವೆ. ಭಾರತೀಯ ಚಿತ್ರರಂಗದ ಅಧಿಕೃತ ಎಂಟ್ರಿಯಾಗಿರುವ ಗುಜರಾತಿ ಭಾಷೆಯ ಚಲ್ಲೋ ಶೋ ಚಿತ್ರ ಕೂಡಾ ಅರ್ಹತಾ ಸುತ್ತಿಗೆ ತಲುಪಿದೆ. ಒಟ್ಟಾರೆ 11 ಸಿನಿಮಾಗಳೂ ಸೇರಿದಂತೆ 15 ಭಾರತೀಯ ಚಿತ್ರ ಹಾಗೂ ಡಾಕ್ಯುಮೆಂಟರಿಗಳು ಪ್ರಶಸ್ತಿ ಸುತ್ತಿನ ಮೊದಲ ಅರ್ಹತೆ ಪಡೆದಿವೆ. ಒಟ್ಟಾರೆ 301 ಚಿತ್ರಗಳು. ಜನವರಿ 24ರಂದು ಶಾರ್ಟ್ ಲಿಸ್ಟ್ ಚಿತ್ರಗಳು ಅನೌನ್ಸ್ ಆಗಲಿವೆ.