ಕಾಮಿಡಿ ಚಿತ್ರಗಳ ಮೂಲಕವೇ ಸ್ಟಾರ್ ಆದ ಕೋಮಲ್, ಒಂದು ಸುದೀರ್ಘ ಗ್ಯಾಪ್ ತೆಗೆದುಕೊಂಡು ಮತ್ತೆ ಚಿತ್ರರಂಗಕ್ಕೆ ಬರುತ್ತಿದ್ದಾರೆ. ಕೋಮಲ್ ನಟಿಸುತ್ತಿರುವ ಹೊಸ ಚಿತ್ರ ಕಾಲಾಯ ನಮಃ. ಪತ್ನಿ ಅನಸೂಯ ಕೋಮಲ್ ಅವರೇ ನಿರ್ಮಾಣ ಮಾಡುತ್ತಿರುವ ಕಾಲಾಯ ನಮಃ, ಯಾವ ಜಾನರ್ ಸಿನಿಮಾ ಎನ್ನುವುದು ಗೊತ್ತಾಗುತ್ತಿಲ್ಲ. ಮತಿವಣನ್ ನಿರ್ದೇಶನದ ಚಿತ್ರದಲ್ಲಿ ಅಧಿಯಾ ಫಿರ್ದೋಸ್ ನಾಯಕಿಯಾಗಿದ್ದಾರೆ. ಸುಚೇಂದ್ರ ಪ್ರಸಾದ್, ತಿಲಕ್, ಶೈನ್ ಶೆಟ್ಟಿ ಅಷ್ಟೇ ಅಲ್ಲ, ಯತಿರಾಜ್ ಜಗ್ಗೇಶ್ ಕೂಡಾ ನಟಿಸಿರುವ ಚಿತ್ರಕ್ಕೆ ಈಗ ಮತ್ತೊಬ್ಬ ಸ್ಟಾರ್ ನಟ ಪ್ರಕಾಶ್ ರೈ ಎಂಟ್ರಿ ಕೊಟ್ಟಿದ್ದಾರೆ.
ಮೈಸೂರಿನಲ್ಲಿ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಪ್ರಕಾಶ್ ರೈ ಚಿತ್ತೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಪ್ರಕಾಶ್ ರೈ, ಸೀರಿಯಸ್ ಪಾತ್ರಗಳಲ್ಲಷ್ಟೇ ಅಲ್ಲ, ಕಾಮಿಡಿಯಲ್ಲೂ ಮಿಂಚಿದ್ದಾರೆ. ಸಣ್ಣ ಸಣ್ಣ ಝಲಕ್ಕುಗಳಲ್ಲಿ ಹೊಟ್ಟೆ ಹುಣ್ಣಾಗಿಸುವಂತೆ ನಗಿಸುವ ತಾಕತ್ತಿನ ಪ್ರಕಾಶ್ ರೈ ಎಂಟ್ರಿ ಚಿತ್ರಕ್ಕೆ ದೊಡ್ಡ ಬೂಸ್ಟ್ ಕೊಟ್ಟಿದೆ. ಆದರೆ ಕೋಮಲ್ ಒಬ್ಬರನ್ನು ಬಿಟ್ಟರೆ ಚಿತ್ರತಂಡದ ಉಳಿದವರೆಲ್ಲ ಸೀರಿಯಸ್ ರೋಲುಗಳನ್ನೇ ಹೆಸರು ಮಾಡಿದವರು. ಬೇರೆ ಬೇರೆ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿರುವ ಕೋಮಲ್, ಈ ಹಿಂದೆ ಪ್ರೇಕ್ಷಕರಿಗೆ ಕಣ್ಣೀರು ಹಾಕುವಂತೆ ಮಾಡಿರುವ ಹಿಸ್ಟರಿಯೂ ಇದೆ. ಕಾಲಾಯ ನಮಃ ಯಾವ ರೀತಿಯ ಸಿನಿಮಾ ಅನ್ನೋದನ್ನು ಚಿತ್ರತಂಡ ಸದ್ಯಕ್ಕೆ ಸಸ್ಪೆನ್ಸ್ ಆಗಿಯೇ ಇಟ್ಟುಕೊಂಡಿದೆ.