ನಟ ಕಿಶೋರ್ ಕೆಜಿಎಫ್ ಕುರಿತು ನೀಡಿದ್ದ ಹೇಳಿಕೆಯೊಂದ ವಿವಾದಕ್ಕೆ ಕಾರಣವಾಗಿತ್ತು. ಕೆಜಿಎಫ್ ನನ್ನ ಆಯ್ಕೆಯ ಸಿನಿಮಾ ಅಲ್ಲ. ಮೈಂಡ್‍ಲೆಸ್ ಸಿನಿಮಾ. ನಾನಂತೂ ಕೆಜಿಎಫ್ ನೋಡಿಲ್ಲ ಎಂದಿದ್ದ ಹೇಳಿಕೆ ಬಿರುಗಾಳಿಯೆಬ್ಬಿಸಿತ್ತು. ಇದೀಗ ನಟ ಕಿಶೋರ್ ಮತ್ತೊಮ್ಮೆ ವಿವಾದಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ. ಮೈಂಡ್‍ಲೆಸ್ ನನ್ನ ಪದ ಅಲ್ಲ. ಅದು ಹೇಗೆ ವಿವಾದವಾಯಿತೋ ಗೊತ್ತಿಲ್ಲ ಎಂದಿರೋ ಕಿಶೋರ್ ಘಟನೆ ಹಾಗೂ ವಿವಾದದ ಹಿಂದಿನ ಕಾರಣ ಮತ್ತು ಹೇಳಿಕೆಗಳನ್ನು ಮತ್ತೊಮ್ಮೆ ವಿವರಿಸಿದ್ದಾರೆ.
ಅದೊಂದು ಹಳೆಯ ಸಂದರ್ಶನ. ನಟಿ ರಶ್ಮಿಕಾ ಮಂದಣ್ಣ ಅವರನ್ನು ಬ್ಯಾನ್ ಮಾಡಬೇಕು ಎಂಬ ಆಗ್ರಹ ಕೇಳಿ ಬಂದಿತ್ತು. ಕಾಂತಾರ ಚಿತ್ರವನ್ನು ರಶ್ಮಿಕಾ ಮಂದಣ್ಣ ಅವರು ಇನ್ನೂ ನೋಡಿಲ್ಲ ಎನ್ನುವುದೇ ವಿವಾದಕ್ಕೆ ಕಾರಣವಾಗಿತ್ತು. ಆ ಪ್ರಶ್ನೆಗೆ ಉತ್ತರವಾಗಿ ನಾನು ಕೇಳಿದ್ದು ಇದು. ನಾನೂ ಕೂಡಾ ಕೆಜಿಎಫ್ ಸಿನಿಮಾ ನೋಡಿಲ್ಲ. ಹಾಗಂತ ನನ್ನನ್ನು ಬ್ಯಾನ್ ಮಾಡ್ತೀರಾ ಎಂದು ಪ್ರಶ್ನೆ ಹಾಕಿದ್ದೆ. ಪ್ರತಿಯಬ್ಬ ವ್ಯಕ್ತಿಗೂ ಆಯ್ಕೆಯ ಸ್ವಾತಂತ್ರ್ಯ ಇದೆ ಎಂದು ಹೇಳಿದ್ದೆ.ಆಗ ನೀಡಿದ್ದ ಸಂದರ್ಶನ ಈಗೇಕೆ ವಿವಾದವಾಯ್ತೋ ಗೊತ್ತಿಲ್ಲ. ಅಲ್ಲೆಲ್ಲೂ ನಾನು ಕೆಜಿಎಫ್ ಮೈಂಡ್‍ಲೆಸ್ ಸಿನಿಮಾ ಎಂದು ಹೇಳಿಲ್ಲ ಎಂದಿದ್ದಾರೆ ಕಿಶೋರ್.
ಅಂತಹ ಚಿತ್ರಗಳನ್ನು ನಾನು ನೋಡುವುದಿಲ್ಲ ಎಂದಿದ್ದು ನಿಜ. ನಾನು ಕೂಡಾ ಹಣಕ್ಕಾಗಿ ಕಮರ್ಷಿಯಲ್ ಚಿತ್ರಗಳಲ್ಲಿ ನಟಿಸಿದ್ದೇನೆ. ನಿಮಗೆ ತಮಿಳಿನ ವಿಸಾರಣೈ ಗೊತ್ತಿರಬಹುದು. ಒಳ್ಳೆಯ ಚಿತ್ರವೇ. ನಾನೂ ನಟಿಸಿದ್ದ ಚಿತ್ರ. ಆದರೆ ಆ ಚಿತ್ರವನ್ನು ನಾನು ನೋಡಲಿಲ್ಲ. ಹಿಂಸೆಯನ್ನು ಸಹಿಸಿಕೊಳ್ಳುವುದು ನನಗೆ ಆಗಲಿಲ್ಲ. ಪ್ರತಿ ಪ್ರೇಕ್ಷಕರಿಗೂ ಆಯ್ಕೆಗಳಿರುತ್ತವೆ ಎಂದಿದ್ದಾರೆ ಕಿಶೋರ್.
ಈಗಲೂ ನಾನು ಹೇಳುತ್ತೇನೆ. ಸಣ್ಣ ಸಣ್ಣ ಸಿನಿಮಾಗಳು, ಗಂಭೀರ ವಿಚಾರ ಹೇಳಿರುವ ಚಿತ್ರಗಳನ್ನು ವೈಯಕ್ತಿಕವಾಗಿ ನೋಡೋಕೆ ಇಷ್ಟಪಡುತ್ತೇನೆ. ಕೆಜಿಎಫ್ ಚಿತ್ರದಿಂದ ಕಲಿಯುವುದು ಸಾಕಷ್ಟಿದೆ. ಒಬ್ಬ ತಂತ್ರಜ್ಞನಾಗಿ ಆ ಸಿನಿಮಾದಿಂದ ಕಲಿತ ವಿಷಯಗಳಿವೆ. ಯಶಸ್ಸಿನಿಂದ ಸಂತೋಷವಿದೆ. ಇಷ್ಟಿದ್ದರೂ ಕೆಜಿಎಫ್ ನನ್ನ ಆಯ್ಕೆಯ ಸಿನಿಮಾ ಅಲ್ಲ. ಹಾಗಂತ ನಾನು ಕೆಜಿಎಫ್ ಚಿತ್ರದ ವಿರೋಧಿಯೆಂದು ಬಿಂಬಿಸುವುದು ಸರಿಯಲ್ಲ. ಸಿನಿಮಾ ನೋಡುವುದಕ್ಕೆ ಪ್ರೇಕ್ಷಕರನ್ನು ಥಿಯೇಟರಿನ ಒಳಗೆ ತಳ್ಳೋಕೆ ಆಗಲ್ಲ. ಹೊರಗೆ ತಳ್ಳೋಕೂ ಆಗಲ್ಲ. ನನ್ನ ಸಿನಿಮಾಮಾದರೂ ಸರಿ, ಬೇರೆಯವರ ಸಿನಿಮಾ ಆದರೂ ಸರಿ. ಸಿನಿಮಾ ನೋಡೋದು ನನ್ನ ಆಯ್ಕೆ ಎಂದಿದ್ದಾರೆ ಕಿಶೋರ್.
ಇಷ್ಟಕ್ಕೂ ನಾನು ನೋಡದೇ ಇರುವ ಸಿನಿಮಾ ಬಗ್ಗೆ ಇದು ಸರಿ, ಇದು ತಪ್ಪು ಎಂದು ಹೇಳುವುದಾದರೂ ಹೇಗೆ ಎಂಬ ಪ್ರಶ್ನೆಯೆತ್ತಿದ್ದಾರೆ ಕಿಶೋರ್.