ಎಲ್ಲ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿರುವಂತೆ ಹೊಂಬಾಳೆ ಫಿಲಮ್ಸ್ ಕೆಜಿಎಫ್ ಚಾಪ್ಟರ್ 3 ಶುರು ಮಾಡಲಿದೆ. ಆಗಲೇ ಸ್ಕ್ರಿಪ್ಟ್ ಕೆಲಸ ಶುರುವಾಗಿದೆ. ಪ್ರಶಾಂತ್ ನೀಲ್ ಈ ಬಗ್ಗೆ ವರ್ಕ್ ಮಾಡುತ್ತಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಆದರೆ ನಿಜಕ್ಕೂ ವಿಜಯ್ ಕಿರಗಂದೂರು ಹೀಗೆ ಹೇಳಿದ್ದಾರಾ?
ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗೆ ನೀಡಿದ್ದ ಸಂದರ್ಶನದಲ್ಲಿ ವಿಜಯ್ ಕಿರಗಂದೂರು ಅವರಿಗೆ ಈ ಪ್ರಶ್ನೆ ಕೇಳಲಾಗಿದೆ. ನೀವು ಕಾಂತಾರ 2 ಹಾಗೂ ಕೆಜಿಎಫ್ 3 ಬಗ್ಗೆ ಪ್ಲಾನ್ ಮಾಡಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ಸ್ಪಷ್ಟವಾಗಿ ಉತ್ತರ ನೀಡಿರುವ ವಿಜಯ್ ಕಿರಗಂದೂರು ಕೆಜಿಎಫ್ 3 ಮಾಡಬಾರದು ಎಂದೇನೂ ಇಲ್ಲ. ಆದರೆ ಸದ್ಯಕ್ಕೆ ಆ ಯೋಚನೆ, ಯೋಜನೆ ಇಲ್ಲ. ಯಶ್ ಬೇರೆ ಪ್ರಾಜೆಕ್ಟ್‍ನಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಶಾಂತ್ ನೀಲ್ ಕೂಡಾ ಸಲಾರ್ ಬ್ಯುಸಿಯಲ್ಲಿದ್ದಾರೆ. ಅದಾದ ನಂತರ ಪ್ರಶಾಂತ್ ನೀಲ್ ಅವರದ್ದೇ ಇನ್ನೊಂದು ಪ್ರಾಜೆಕ್ಟ್ ಇದೆ. ಇದು ಮುಗಿದ ಮೇಲೆಯೇ ಶುರು ಮಾಡಬೇಕು. ಪ್ರಶಾಂತ್ ನೀಲ್ ಕಥೆ ಸಿದ್ಧ ಮಾಡಬೇಕು. ಎಲ್ಲವೂ ಆದರೆ ಕೆಜಿಎಫ್ 3 ಮಾಡುತ್ತೇವೆ. ಸದ್ಯಕ್ಕಿಲ್ಲ ಎಂದಿದ್ದಾರೆ ವಿಜಯ್ ಕಿರಗಂದೂರು.
ಕಾಂತಾರ 2 ಬಗ್ಗೆ ಕೂಡಾ ಇದೇ ಮಾತು ಹೇಳಿದ್ದಾರೆ. ಕಾಂತಾರ 2 ಬಗ್ಗೆ ನಾವು ಸ್ಪಷ್ಟವಾಗಿದ್ದೇವೆ. ರಿಷಬ್ ಶೆಟ್ಟಿ ಬಿಡುವು ಮಾಡಿಕೊಂಡು ಕಥೆ ಸಿದ್ಧ ಮಾಡಿದ ತಕ್ಷಣ ಕಾಂತಾರ 2 ಶುರು ಮಾಡುತ್ತೇವೆ. ರಿಷಬ್ ಶೆಟ್ಟಿ ಬಿಡುವಾಗುವುದನ್ನು ಕಾಯುತ್ತಿದ್ದೇವೆ ಎಂದಿದ್ದಾರೆ ವಿಜಯ್ ಕಿರಗಂದೂರು.