ದೊಡ್ಮನೆ ಕುಡಿಯ ಮೊದಲ ಚಿತ್ರವೆಂದರೇನೇ ಹಾಗೆ, ಒಂದು ಸಂಚಲನ ಮೂಡಿಸುತ್ತೆ. ಈಗ ಯುವ ರಾಜ್ ಕುಮಾರ್ ಸರದಿ. ಇದೇ ಮೊದಲ ಬಾರಿಗೆ ರಾಜ್ ಕುಟುಂಬದ ಒಬ್ಬ ಹೀರೋ ಎಂಟ್ರಿ ಬೇರೆಯವರ ಬ್ಯಾನರ್ ಮೂಲಕ ಆಗುತ್ತಿದೆ. ಹೊಂಬಾಳೆ ಮೂಲಕ ಯುವ ರಾಜ್ ಕುಮಾರ್ ಎಂಟ್ರಿಯಾಗುತ್ತಿದ್ದು, ಸಂತೋಷ್ ಆನಂದರಾಮ್ ನಿರ್ದೇಶಕ ಅನ್ನೋ ಸಂಗತಿ ಗೊತ್ತೇ ಇದೆ. ಈ ಚಿತ್ರಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು, ಜನವರಿ ಕೊನೆಯಲ್ಲಿ ಚಿತ್ರದ ಮುಹೂರ್ತ ನೆರವೇರಲಿದೆ ಎಂಬ ಸುದ್ದಿ ಚಿತ್ರರಂಗದ ತುಂಬೆಲ್ಲ ಹರಿದಾಡುತ್ತಿದೆ.
ರಾಮಾಚಾರಿಯಲ್ಲಿ ಪ್ರೀತಿ, ಸ್ನೇಹ ಹಾಗೂ ವಾತ್ಸಲ್ಯದ ಕಥೆ ಹೇಳಿದ್ದ ಸಂತೋಷ್ ಆನಂದರಾಮ್, ರಾಜಕುಮಾರ ಚಿತ್ರದಲ್ಲಿ ತಂದೆ ಮಕ್ಕಳ ಬಾಂಧವ್ಯ, ಅನಾಥಾಶ್ರಮದ ಬಗ್ಗೆ ಮನೋಜ್ಞ ಚಿತ್ರಣ ಕಟ್ಟಿಕೊಟ್ಟಿದ್ದರು. ಸಂತೋಷ್ ಅವರ ವೃತ್ತಿ ಜೀವನದ ಮಾಸ್ಟರ್ ಪೀಸ್ ರಾಜಕುಮಾರ. ಯುವರತ್ನದಲ್ಲಿ ಕಾಲೇಜು, ಡ್ರಗ್ಸ್ ಇತ್ಯಾದಿ ಇತ್ಯಾದಿಗಳ ಬಗ್ಗೆ ಸಂದೇಶ ನೀಡಿದ್ದರು. ರಾಘವೇಂದ್ರ ಸ್ಟೋರ್ಸ್ ಚಿತ್ರ ಇನ್ನೂ ರಿಲೀಸ್ ಆಗಬೇಕಿದೆ. ಯುವ ಚಿತ್ರದಲ್ಲಿ ತಂದೆ ಮಗನ ವಾತ್ಸಲ್ಯದ ಕಥೆ ಇದೆ ಎನ್ನಲಾಗಿದ್ದು, ಅಧಿಕೃತ ಮಾಹಿತಿ ಇಲ್ಲ.
ಯುವರಾಜ್ ಚಿತ್ರದ ಮುಹೂರ್ತವನ್ನು ಅದ್ಧೂರಿಯಾಗಿ ನಡೆಸುವ ಯೋಚನೆ ಹೊಂಬಾಳೆಯವರಿಗಿದೆ. ವಿಜಯ್ ಕಿರಗಂದೂರು ಚಿತ್ರದ ಮುಹೂರ್ತಕ್ಕೆ ವಿಶೇಷ ಪ್ಲಾನ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಫೆಬ್ರವರಿ 2ನೇ ವಾರದಲ್ಲಿ ಚಿತ್ರದ ಚಿತ್ರೀಕರಣ ಶುರುವಾಗಲಿದ್ದು, ಪ್ರಿ-ಪ್ರೊಡಕ್ಷನ್ಸ್ ಕೆಲಸಗಳೆಲ್ಲ ಬಹುತೇಕ ಮುಗಿದಿವೆ ಎಂಬ ಮಾಹಿತಿ ಇದೆ. ಚಿತ್ರಕ್ಕೆ ಮಲಯಾಳಂ ನಾಯಕಿ ಕಲ್ಯಾಣಿ ಪ್ರಿಯದರ್ಶನ್ ಹೆಸರು ಕೇಳಿಬರುತ್ತಿದೆ.