ವೇದ ಚಿತ್ರದ ದಿಗ್ವಿಜಯ ಯಾತ್ರೆ ಇಡೀ ರಾಜ್ಯವನ್ನು ಸುತ್ತಿ ಸುತ್ತಿ ಬರುತ್ತಿದೆ. ನಿನ್ನೆ ಬೆಳಗಾವಿ, ಹುಬ್ಬಳ್ಳಿ, ಧಾರವಾಡದಲ್ಲಿ ಅಭಿಮಾನಿಗಳ ಜೊತೆ ಶಿವಣ್ಣ ಮತ್ತು ತಂಡ ಹಾಡಿ ಕುಣಿಯಿತು. ತೆರೆದ ವಾಹನಗಳಲ್ಲಿ ಭವ್ಯ ಮೆರವಣಿಗೆ ಮಾಡಿ ಶಿವಣ್ಣಗೆ ಧನ್ಯವಾದ ಅರ್ಪಿಸಿದರು ಅಭಿಮಾನಿಗಳು. ಯುವರಾಜ್ ಕಟೌಟ್ ಮೂಲಕ ಸ್ವಾಗತ ಕೋರಿದಾಗ ಶಿವಣ್ಣ ಭಾವುಕರಾದರು.
ಅಭಿಮಾನಿಗಳ ಜೊತೆ ಶಿವಣ್ಣ ಬೆರೆಯುವುದು, ಜಾಗ ಎಂಥದ್ದೇ ಇರಲಿ, ಎಷ್ಟೇ ಇರಲಿ.. ಅಭಿಮಾನಿಗಳು ಕೇಳಿದ ಕೂಡಲೇ ಹಾಡುವುದು, ಕುಣಿಯುವುದು ಹೊಸದೇನಲ್ಲ. ಆದರೆ ಗಾನವಿ ಲಕ್ಷ್ಮಣ್, ಆದಿತಿ ಸಾಗರ್ ಮುಖದಲ್ಲಿ ಶಿವಣ್ಣನ ಬಗ್ಗೆ ಒಂದು ಬೆರಗಿತ್ತು. ನಮಗೆ ಒಂದು ಹೆಸರು, ಗೌರವ ಇರುವುದೇ ಅಭಿಮಾನಿಗಳಿಂದ. ಅವರು ಕೇಳಿದರೆ ನಾವು ಮಾಡಲೇಬೇಕು, ಹಾಡಬೇಕು, ಕುಣಿಯಬೇಕು ಎನ್ನುವುದು ಶಿವಣ್ಣ ಪಾಲಿಸಿ. ವೇದ ಚಿತ್ರದ ಯಶಸ್ಸು ಶಿವಣ್ಣಗೆ ಒಂದು ಅದ್ಭುತ ಅವಕಾಶ ನೀಡಿದೆ. ಎಲ್ಲಿಯೇ ಹೋದರು ಶಿವಣ್ಣ ಅವರಿಗೆ ಪುಷ್ಪ ಪುಷ್ಪ ಹಾಗೂ ಗಿಲಕ್ಕೋ ಶಿವ ಗಿಲಕ್ಕೋ ಹಾಡು ಹಾಡುತ್ತಿದ್ದು, ಪ್ರೇಕ್ಷಕರೂ ಹುಚ್ಚೆದ್ದು ಕುಣಿಯುತ್ತಿದ್ದಾರೆ. ನಿರ್ದೇಶಕ ಹರ್ಷ ತಮ್ಮ ನಿರ್ದೇಶನದ ಚಿತ್ರದ ಗೆಲುವಿನ ಸಂಭ್ರಮದ ಜೊತೆಗೆ ಶಿವಣ್ಣ ಅವರನ್ನು ಕೂಡಾ ನಿಭಾಯಿಸುತ್ತಿದ್ದಾರೆ.
ಇಂದು ಶಿವಮೊಗ್ಗ, ಭದ್ರಾವತಿ, ತಿಪಟೂರು ಹಾಗೂ ತುಮಕೂರು ನಗರಗಳಿಗೆ ವೇದ ತಂಡ ಭೇಟಿ ಕೊಡಲಿದೆ. ವೇದ ಚಿತ್ರ ಪ್ರದರ್ಶನವಾಗುತ್ತಿರುವ ಚಿತ್ರಮಂದಿರಗಳಲ್ಲಿ ಶಿವಣ್ಣ, ಗೀತಾ ಶಿವ ರಾಜ್ ಕುಮಾರ್ & ಟೀಂ ಅಭಿಮಾನಿಗಳನ್ನು ಭೇಟಿ ಮಾಡಲಿದೆ.