ಕಾಮಿಡಿ ಕಿಂಗ್ ಶರಣ್ ಎಂತಹ ಪಾತ್ರದೊಳಕ್ಕೂ ಲೀನವಾಗಬಲ್ಲ ನಟ. ತರುಣ್ ಶಿವಪ್ಪ ಹಾಗೂ ಮಾನಸ ಮತ್ತು ತರುಣ್ ಸುಧೀರ್ ನಿರ್ಮಾಪಕರು. ಆದಿತಿ ಪ್ರಭುದೇವ ಹಾಗೂ ಮೇಘನಾ ಗಾಂವ್ಕರ್ ನಾಯಕಿಯರು. ಕರ್ವ ನವನೀತ್ ಚಿತ್ರದ ನಿರ್ದೇಶಕ.ಇವರೆಲ್ಲರೂ ಸೇರಿ ಮಾಡ ಹೊರಟಿರೋ ಚಿತ್ರವೇ ಛೂಮಂತರ್. ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದ್ದು ಅದ್ಭುತವಾಗಿ ಮೂಡಿ ಬಂದಿದೆ.
ಇತ್ತೀಚೆಗಷ್ಟೇ ಅವತಾರ ಪುರುಷ ಚಿತ್ರದಲ್ಲಿ ಮಾಟ ಮಂತ್ರದ ಲೋಕಕ್ಕೆ ಹೋಗಿ ಬಂದಿದ್ದ ಶರಣ್, ಈ ಚಿತ್ರದಲ್ಲಿ ದೆವ್ವಗಳ ಜೊತೆ ಡ್ಯಾನ್ಸ್ ಮಾಡುತ್ತಾರಾ ಎಂದರೆ ನವನೀತ್ ಹೇಳೋದು ಹೀಗೆ. ಚಿತ್ರದಲ್ಲಿ ಒಂದಲ್ಲ.. ಮೂರು ಕಥೆಗಳಿವೆ. ಆ ಮೂರು ಕಥೆಗಳಿಗೂ ನಾಯಕ ಮೂಲ ಪುರುಷ. ಚಿತ್ರದಲ್ಲಿ ಹಾರರ್ ಮತ್ತು ಕಾಮಿಡಿ ಎರಡೂ ಇದೆ. ಕಾಮಿಡಿ ನೋಡುವಾಗ ಪ್ರೇಕ್ಷಕ ಎಷ್ಟು ನಗುತ್ತಾನೋ.. ಅಷ್ಟೇ ಭಯದಿಂದ ನಡುಗುವಂತೆ ಮಾಡುವುದೇ ನನ್ನ ಸವಾಲು ಎನ್ನುತ್ತಾರೆ ನವನೀತ್.
ಚಿತ್ರದಲ್ಲಿ ಚಿಕ್ಕಣ್ಣ ಕೂಡಾ ನಟಿಸುತ್ತಿದ್ದು, ಪ್ರಭು ಮುಂಡ್ಕರ್, ರಜನಿ ಭಾರದ್ವಾಜ್ ಇನ್ನಿತರ ಪಾತ್ರಗಳಲ್ಲಿದ್ದಾರೆ. ಚಂದನ್ ಶೆಟ್ಟಿ ಸಂಗೀತ ನೀಡುತ್ತಿದ್ದು, ಹಿನ್ನೆಲೆ ಸಂಗೀತ ಅವಿನಾಶ್ ಆರ್. ಬಸುತ್ಕರ್ ಅವರದ್ದು.