ಯೋಗರಾಜ್ ಭಟ್ ಇರೋದೇ ಹಾಗೆ. ಅವರ ಜೊತೆಯಲ್ಲಿದ್ದವರು ಏನೋ ಒಂದು ಆಗುತ್ತಾರೆ. ಭಟ್ಟರ ಕ್ಯಾಂಪ್ ಬೆಳೆದಿರುವುದೇ ಹಾಗೆ ಎನ್ನಬಹುದು. ಈಗ ಪದವಿ ಪೂರ್ವ ಚಿತ್ರದ ನಾಯಕಿಯರಲ್ಲೊಬ್ಬರಾದ ಅಂಜಲಿ ಅನೀಶ್ ಅವರದ್ದೂ ಇದೇ ಕಥೆ. ಅಂಜಲಿ ಲಾಯರ್ ಫ್ಯಾಮಿಲಿಯ ಹುಡುಗಿ. ಅಪ್ಪ, ಅಮ್ಮ, ಅಣ್ಣ ಮೂವರೂ ವಕೀಲರೇ. ಅಂಜಲಿ ಕೂಡಾ ಲಾ ಸ್ಟೂಡೆಂಟ್. ಇನ್ನು ಅಂಜಲಿಗೆ ಇಷ್ಟವಿದ್ದದ್ದು ಡೈರೆಕ್ಷನ್‍ನಲ್ಲಿ. ಕನ್ನಡದಲ್ಲಿ ಅಂಬಿ ನಿಂಗ್ ವಯಸ್ಸಾಯ್ತೋ ಹಾಗೂ ಹಿಂದಿಯಲ್ಲಿ ಭಯ್ಯಾಜಿ ಸೂಪರ್ ಹಿಟ್ ಚಿತ್ರಗಳಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿದ್ದವರು. ಅಂಜಲಿ ಭಟ್ಟರ ಕ್ಯಾಂಪಿಗೆ ಬಂದಿದ್ದೂ ಕೂಡಾ ಡೈರೆಕ್ಟರ್ ಆಗುವ ಆಸೆ ಇಟ್ಟುಕೊಂಡು.
ಪದವಿಪೂರ್ವ ಚಿತ್ರದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡುವ ನಿರೀಕ್ಷೆಯಲ್ಲಿ ಭಟ್ಟರನ್ನು ರೀಚ್ ಆದ ಅಂಜಲಿಗೆ ಭಟ್ಟರು ತಮ್ಮದೇ ಶೈಲಿಯಲ್ಲಿ ನೀವ್ಯಾಕೆ ನಾಯಕಿಯಾಗಿ ನಟಿಸಬಾರದು ಎಂದರು. ಅಲ್ಲಿಯವರೆಗೂ ಆ ಬಗ್ಗೆ ಯೋಚನೆಯನ್ನೇ ಮಾಡಿದಿದ್ದ ನಾನು, ನಟಿಯಾಗೋದಿಕ್ಕೆ ಯೆಸ್ ಎಂದೆ. ಕ್ಯಾಮೆರಾ ಹಿಂದೆ ನಿಲ್ಲೋಕೆ ಬಂದಿದ್ದವಳು ಪದವಿಪೂರ್ವ ಚಿತ್ರದಲ್ಲಿ ನಿತ್ಯಾ ಪಾತ್ರದಲ್ಲಿ ನಟಿಸಿದೆ ಎಂದಿದ್ದಾರೆ ಅಂಜಲಿ.
ಚಿತ್ರದಲ್ಲಿ ನನ್ನದು ನಿತ್ಯಾ ಹೆಸರಿನ ಪಾತ್ರ. ಮುಗ್ಧೆ. ಎಲ್ಲವನ್ನೂ ಎಲ್ಲರನ್ನೂ ನಂಬುವ ಹುಡುಗಿ. ಜಗಳ ಅಂದರೆ ಅಲರ್ಜಿ. ಎಲ್ಲರನ್ನು ನಂಬುವ ಕಾರಣಕ್ಕೇ ಯಾಮಾರುವ ಹುಡುಗಿ. ಎಂಟರ್‍ಟೈನ್‍ಮೆಂಟ್ ಇದೆ. ಕೌಟುಂಬಿಕ ಮೌಲ್ಯ ಹಾಗೂ ಸ್ನೇಹದ ಮೌಲ್ಯ ಹೇಳುವ ಕಥೆ ಎನ್ನುವ ಅಂಜಲಿ, ನಟನೆಯನ್ನೇ ಸದ್ಯಕ್ಕೆ ಮಾಡುವ ಯೋಚನೆಯಲ್ಲಿದ್ದಾರೆ. ನಾಲ್ಕೈದು ವರ್ಷಗಳ ನಂತರ ಖಂಡಿತಾ ಡೈರೆಕ್ಟರ್ ಆಗುತ್ತೇನೆ ಎಂಬ ವಿಶ್ವಾಸವೂ ಅಂಜಲಿ ಅವರಲ್ಲಿದೆ.