ಬಾಲಿವುಡ್ ಈಗ ಬಾಲಿವುಡ್ ಆಗಿ ಉಳಿದಿಲ್ಲ. ಅದೀಗ ಭಾರತೀಯ ಚಿತ್ರರಂಗದ ಬಾದ್‍ಶಾಹ್ ಅಲ್ಲ. ಗೆಲುವು ಸಿಗುತ್ತಿದ್ದಾಗ ಇರುವುದೇ ಬೇರೆ. ಸೋತಾಗ ನಡೆಯುವುದೇ ಬೇರೆ. ಹಮ್ಮು..ಬಿಮ್ಮು..ಅಹಮ್ಮು..ಅಹಂಕಾರ..ಕೋಪ..ತಾಪ..ದ್ವೇಷಗಳನ್ನೆಲ್ಲ ಸೈಡಿಗೆ ತಳ್ಳೋ ತಾಕತ್ತು ಕೇವಲ ಸೋಲಿಗೆ ಇದೆ. ವೈಫಲ್ಯಕ್ಕೆ ಇದೆ. ಬಾಲಿವುಡ್‍ನ ಶಾರೂಕ್ ಖಾನ್ ಮತ್ತು ಸಲ್ಮಾನ್ ಖಾನ್ ಅವರಿಬ್ಬರ ಜೋಡಿಯ ಮಿಲನವನ್ನು ಸೋಷಿಯಲ್ ಮೀಡಿಯಾ ವಿಶ್ಲೇಷಣೆ ಮಾಡುತ್ತಿರುವುದು ಹೀಗೆ.
ಸಲ್ಮಾನ್ ಖಾನ್ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಶಾರೂಕ್ ಖಾನ್ ಕೂಡಾ ಬಂದಿದ್ದರು. ಇತ್ತೀಚೆಗೆ ಬಾಲಿವುಡ್ ಖಾನ್‍ಗಳಿಗೆ ಗೆಲುವು ಸಿಗುತ್ತಿಲ್ಲ. ದೂರವಾಗಿಯೇ ಇದೆ. ಹೀಗಾಗಿಯೇ ಒಂದು ಕಾಲದಲ್ಲಿ ಅವರಿದ್ದ ಕಡೆ ನಾನಿರಲ್ಲ.. ಎಂದು ದೂರ ಹೋಗುತ್ತಿದ್ದ ಖಾನ್‍ಗಳು ಈಗ ಒಟ್ಟಿಗೇ ಸೇರಿದ್ದಾರೆ. ಇತ್ತೀಚೆಗೆ ಬಾಲಿವುಡ್‍ನ ಎಲ್ಲರೂ ಒಟ್ಟಾಗುತ್ತಿದ್ದಾರೆ.
ಶಾರೂಕ್ ಖಾನ್‍ಗೆ ಅರ್ಜೆಂಟಾಗಿ ಗೆಲುವು ಬೇಕಿದೆ. ಒಂದು ಕಾಲದ ಸೂಪರ್ ಹಿಟ್ ಚಿತ್ರಗಳ ಸರದಾರ ಗೆಲುವನ್ನು ನೋಡಿ ಅರ್ಧದಶಕವಾಗಿದೆ. ಸಲ್ಮಾನ್ ಖಾನ್‍ಗೆ ಕೂಡಾ ಸೋಲಿನ ಪರಿಚಯವಾಗಿದೆ. ಹೀಗಾಗಿಯೇ ಬಾಲಿವುಡ್ ಒಂದಾಗಿ ಗೆಲ್ಲಬೇಕು ಎಂಬ ನಿರ್ಧಾರಕ್ಕೆ ಬಂದಿದ್ದು ಪರಸ್ಪರ ಪಾರ್ಟಿ, ಕಾರ್ಯಕ್ರಮಗಳಲ್ಲಿ ಇತ್ತೀಚೆಗೆ ಜೊತೆಯಾಗುತ್ತಿದ್ದಾರೆ. ದಶಕಗಳ ಹಿಂದೆ ಶಾರೂಕ್ ಖಾನ್ ಪಾರ್ಟಿಗೆ ನುಗ್ಗಿ, ಸಲ್ಮಾನ್ ಖಾನ್ ದಾಂಧಲೆಯನ್ನೇ ನಡೆಸಿದ್ದರು. ಬಾಲಿವುಡ್‍ನಲ್ಲಿ ಎರಡು ಬಣಗಳು ಸೃಷ್ಟಿಯಾಗಿದ್ದವು.
ಕಳೆದ ಕೆಲ ವರ್ಷಗಳಲ್ಲಿ ಬಾಲಿವುಡ್ ಮಕಾಡೆ ಮಲಗಿದ್ದು, ಹಿಟ್ ಚಿತ್ರಗಳೆಂದರೆ ದಕ್ಷಿಣದ ಚಿತ್ರಗಳು ಮಾತ್ರ ಎನ್ನುವಂತಾಗಿದೆ. ಹಿಂದಿಯಲ್ಲಿ ಹಿಟ್ ಆದ ಚಿತ್ರ ಬಾಲಿವುಡ್ ಫಾರ್ಮುಲಾಗೆ ವಿರುದ್ಧವಾಗಿದೆ. ಅದರಲ್ಲಿಯೂ ಅದು ಸ್ಟಾರ್ ಚಿತ್ರವಲ್ಲ. ಅಳಿವು ಉಳಿವಿನ ಸಮಸ್ಯೆ ಎದುರಿಸುತ್ತಿರುವ ಬಾಲಿವುಡ್ ಈಗ ಒಗ್ಗಟ್ಟಿನ ಮಂತ್ರ ಜಪಿಸತೊಡಗಿದೆ. ಪಾರ್ಟಿಯಲ್ಲಿ ಆಲ್‍ಮೋಸ್ಟ್ ಬಾಲಿವುಡ್ ಇದ್ದರೂ, ಶಾರೂಕ್-ಸಲ್ಮಾನ್ ಪರಸ್ಪರ ಅಪ್ಪಿಕೊಂಡು ವಿಶ್ ಮಾಡಿರುವ ಫೋಟೋ ವೈರಲ್ ಆಗಿದೆ.