ಇತ್ತೀಚೆಗೆ ಡಾ.ರಾಜ್ ಕುಟುಂಬದ ಹೀಯಾಳಿಸುವ ದಂಧೆ ಜೋರಾಗಿಯೇ ನಡೆಯುತ್ತಿದೆ. ಡಾ.ರಾಜ್, ಪಾರ್ವತಮ್ಮ, ಪುನೀತ್ ಅವರನ್ನಷ್ಟೇ ಅಲ್ಲ, ಅಶ್ವಿನಿಯವರನ್ನೂ ಬಿಡದೆ ಅಸಹ್ಯವಾಗಿ ಪೋಸ್ಟ್ ಹಾಕುವ ದಂಧೆಯೇ ನಡೆಯುತ್ತಿದೆ. ಶಿವಣ್ಣ, ಗೀತಾ, ರಾಘವೇಂದ್ರ ರಾಜಕುಮಾರ್, ಅಶ್ವಿನಿ ಪುನೀತ್ ರಾಜಕುಮಾರ್ ಯಾರನ್ನ ಬಿಟ್ಟಿಲ್ಲ. ಅವರ ಮಕ್ಕಳನ್ನೂ ಬಿಟ್ಟಿಲ್ಲ. ಸಾವು, ಕಾಯಿಲೆ, ಬಣ್ಣ, ದೇಹದ ಗಾತ್ರ.. ಹೀಗೆ ಪ್ರತಿಯೊಂದನ್ನೂ ಹಿಡಿದು ಟ್ರೋಲ್ ಮಾಡುವ ಜನ ವ್ಯಕ್ತಿತ್ವ ಚಾರಿತ್ರ್ಯ ಹರಣಕ್ಕೂ ಇಳಿದಿದ್ದಾರೆ. ಸಾಮಾನ್ಯವಾಗಿ ರಾಜ್ ಫ್ಯಾಮಿಲಿ ಇಂತಹವುಗಳಿಗೆಲ್ಲ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಅವರು ಆಕ್ಟಿವ್ ಕೂಡಾ ಇರಲಿಲ್ಲ. ಆದರೆ ಇತ್ತೀಚೆಗೆ ರೋಸಿ ಹೋದ ಅಭಿಮಾನಿಗಳೇ ಸೈಬರ್ ಕ್ರೈಂ ಪೊಲೀಸರಿಗೆ ದೂರು ಕೊಟ್ಟಿದ್ದರು. ಇಂತಹ ಕೆಲವು ಅಕೌಂಟ್‍ಗಳನ್ನು ಪತ್ತೆ ಮಾಡಿರುವ ಸೈಬರ್ ಪೊಲೀಸರು ಸದ್ಯಕ್ಕೆ ಅವುಗಳನ್ನು ಡಿ-ಆಕ್ಟಿವೇಟ್ ಮಾಡಿದ್ದಾರೆ. ಶೀಘ್ರದಲ್ಲೇ ಅರೆಸ್ಟ್ ಕೂಡಾ ಮಾಡಲಿದ್ದಾರೆ.
ಮಂಡ್ಯದ ಒಬ್ಬ ಯುವಕ ಡಿ ಬಾಸ್ ಕರ್ನಾಟಕ ಎಂಬ ಅಕೌಂಟ್ ತೆರೆದಿದ್ದಾನೆ. ಮತ್ತೊಬ್ಬ ಮೈಸೂರಿನಲ್ಲಿ ನಾಗರಾಜ್ ದಚ್ಚ ಎಂಬ ಹೆಸರಲ್ಲಿ ಅಕೌಂಟ್ ಆಕ್ಟಿವ್ ಮಾಡಿದ್ದ. ಕಿಚ್ಚ ಹರೀಶ್ ಎಂಬ ಮತ್ತೊಬ್ಬ ಬೆಂಗಳೂರಿನವನು. ಗಡ್ಡ ಸ್ಟೈಲ್ ದಚ್ಚು ನಾಗರಾಜ್ (ಡಿ ಬಾಸ್) ಎಂಬ ಮತ್ತೊಬ್ಬ ಮೈಸೂರಿನವನು. ಇವರೆಲ್ಲ ಒಬ್ಬೊಬ್ಬರೂ ಹಲವು ಫೇಕ್ ಅಕೌಂಟ್ ಸೃಷ್ಟಿಸಿ, ಅವುಗಳಲ್ಲಿ ಡಾ.ರಾಜ್ ಕುಟುಂಬದವರ ಬಗ್ಗೆ ಅವಹೇಳನ, ಲೇವಡಿಯನ್ನೇ ಕಾಯಕ ಮಾಡಿಕೊಂಡಿದ್ದರು. ಒಬ್ಬನಂತೂ 150ಕ್ಕೂ ಹೆಚ್ಚು ಅಕೌಂಟ್ ಓಪನ್ ಮಾಡಿ ಟ್ರೋಲ್ ಮಾಡುವುದನ್ನೇ ವೃತ್ತಿ ಮಾಡಿಕೊಂಡಿದ್ದ. ಈ ಬಗ್ಗೆ ಸೈಬರ್ ಪೊಲೀಸರು ಸದ್ಯಕ್ಕೆ ನಾಲ್ವರ ಹೆಸರು ಬಹಿರಂಗಪಡಿಸಿದ್ದು, ಇಂತಹ ಇನ್ನು ಹಲವರ ಹೆಸರುಗಳಿದ್ದು, ಶೀಘ್ರದಲ್ಲೇ ಅರೆಸ್ಟ್ ಮಾಡುವುದಾಗಿ ತಿಳಿಸಿದ್ದಾರೆ.