ಚೀನಾದಲ್ಲಿ ಕೊರೊನಾ ಮತ್ತೊಮ್ಮೆ ತಾಂಡವ ಮಾಡಲು ಶುರುವಾಗುತ್ತಿದ್ದಂತೆಯೇ ಸರ್ಕಾರ ಮತ್ತೊಮ್ಮೆ ಕೊರೊನಾ ದಂಡಾಸ್ತ್ರ ಪ್ರಯೋಗ ಮಾಡಿದೆ. ಎಂದಿನಂತೆ ಮೊದಲ ಟಾರ್ಗೆಟ್ ಚಿತ್ರಮಂದಿರಗಳೇ. ಇನ್ನು ಮುಂದೆ ಥಿಯೇಟರುಗಳಲ್ಲಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಉಳಿದಂತೆ ಎಲ್ಲ ಕಡೆ ಸೇಮ್ ರೂಲ್ಸ್ ಇದೆ. ಥಿಯೇಟರಿಗೆ ಹೋಗುವವರು ಮಾಸ್ಕ್ ಧರಿಸಲೇಬೇಕು. ಇದು ಕಡ್ಡಾಯ. ಮಾಸ್ಕ್ ಇಲ್ಲದವರನ್ನು ಥಿಯೇಟರ್ ಒಳಗೆ ಬಿಡಬಾರದು ಎಂದು ಖುದ್ದು ಆರ್.ಅಶೋಕ್ ಹೇಳಿದ್ದಾರೆ. ಆರೋಗ್ಯ ಸಚಿವ ಸುಧಾಕರ್ ಅವರದ್ದೂ ಕೂಡಾ ಇದೇ ಹೇಳಿಕೆ.
2022ರಲ್ಲಿ ಕನ್ನಡ ಚಿತ್ರರಂಗ ಭರ್ಜರಿ ಹಿಟ್, ಸಕ್ಸಸ್ ಕಂಡಿದೆ. ಇದಕ್ಕೆ ಮತ್ತೊಮ್ಮೆ ಕೊಡಲಿ ಪೆಟ್ಟು ಬೀಳುತ್ತಾ ಎಂಬ ಆತಂಕ ಚಿತ್ರೋದ್ಯಮಿಗಳದ್ದು. ವೇದ ಚಿತ್ರದ ಯಶಸ್ಸಿನ ಯಾತ್ರೆಯಲ್ಲಿರುವ ನಟ ಶಿವರಾಜಕುಮಾರ್ ಕೂಡಾ ಸರ್ಕಾರದ ನಿಯಮಗಳನ್ನು ಪಾಲಿಸುವ ಭರವಸೆ ಕೊಟ್ಟಿದ್ದಾರೆ. ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮಾ.ಹರೀಶ್ ಅವರು ಕೂಡಾ ಸರ್ಕಾರದ ನಿಯಮ ಪಾಲಿಸುವ ಆಶ್ವಾಸನೆ ಕೊಟ್ಟಿದ್ದಾರೆ.
ಏಕೆಂದರೆ ಸದ್ಯಕ್ಕೆ ಜಾರಿಯಾಗಿರುವುದು ಮಾಸ್ಕ್ ನಿಯಮ ಮಾತ್ರ. ಸ್ಯಾನಿಟೈಸರ್, ಅಂತರ ಕಾಪಾಡಿಕೊಳ್ಳುವ, 50:50 ರೂಲ್ಸ್, ಥಿಯೇಟರ್ ತಿಂಡಿ ತಿನಿಸು.. ಇಂತಹ ರೂಲ್ಸ್ ಜಾರಿಯಾಗಿಲ್ಲ. ಹೀಗಾಗಿ ಕೇವಲ ಮಾಸ್ಕ್ ನಿಯಮ ಜಾರಿಯಾಗಿರುವ ಕಾರಣ ಥಿಯೇಟರಿನವರೂ ಸಕಾರಾತ್ಮಕವಾಗಿಯೇ ಸ್ಪಂದಿಸಿದ್ದಾರೆ.
ಅಂದಹಾಗೆ ಥಿಯೇಟರ್ ಸಿಬ್ಬಂದಿಗೆ ಎರಡು ಡೋಸ್ ಲಸಿಕೆ ಕಡ್ಡಾಯವಾಗಿ ಆಗಿರಬೇಕು. ಆದರೆ ಸದ್ಯಕ್ಕೆ ದಂಡ ವಿಧಿಸುವ ಯಾವುದೇ ಕ್ರಮ, ಆಲೋಚನೆ ಸದ್ಯಕ್ಕಿಲ್ಲ ಎಂದಿದ್ದಾರೆ ಕಂದಾಯ ಸಚಿವ ಆರ್.ಅಶೋಕ್. ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದೆ. ಆತಂಕಕ್ಕೊಳಗಾಗಬೇಡಿ. ಇದು ಎಚ್ಚರಿಕೆ ಮಾತ್ರ ಎಂಬ ರೀತಿ ಭರವಸೆ ನೀಡಿರುವುದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್.