ವೇದ.. ಚಿತ್ರ ಬ್ಲಾಕ್ ಬಸ್ಟರ್ ಲಿಸ್ಟಿಗೆ ಸೇರಿದೆ. ಗಿಲಕ್ಕೋ ಶಿವ ಗಿಲಕ್ಕೋ.. ಜುಂಜಪ್ಪನ ಹಾಡು.. ಪುಷ್ಪ ಪುಷ್ಪ.. ಹಾಡುಗಳು ಈಗ ಎಲ್ಲಿ ನೋಡಿದ್ರೂ ಟ್ರೆಂಡ್. ಹರ್ಷ ಕಮರ್ಷಿಯಲ್ ಮಸಾಲಾ ಚಿತ್ರದಲ್ಲಿ ಮತ್ತೊಮ್ಮೆ ಗೆದ್ದಿದ್ದರೆ, ಗೀತಾ ಶಿವರಾಜಕುಮಾರ್ ಮೊದಲ ಪ್ರಯತ್ನದಲ್ಲಿಯೇ ಸಕ್ಸಸ್ ಕಂಡಿದ್ದಾರೆ. ಶಿವಣ್ಣ ಅವರದ್ದೀಗ ಎಲ್ಲೆಲ್ಲೂ ಸಕ್ಸಸ್ ಯಾತ್ರೆ.
ಬೆಂಗಳೂರಿನ ಹಲವು ಚಿತ್ರಮಂದಿರಗಳಲ್ಲಿ ಯಶಸ್ಸಿನ ಪಯಣ ಮುಂದುವರೆಸಿರೋ ಶಿವಣ್ಣ, ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ವಿವಧೆಡೆ ಥಿಯೇಟರುಗಳಿಗೆ ಭೇಟಿ ಕೊಡುತ್ತಿದ್ದಾರೆ. ಈ ಹಾದಿಯಲ್ಲಿ ಶಿವಣ್ಣ ಜೊತೆಯಲ್ಲಿ ಗಾನವಿ ಲಕ್ಷ್ಮಣ್, ಮಗಳು ಆದಿತಿ ಸಾಗರ್, ಶ್ವೇತಾ ಚೆಂಗಪ್ಪ, ಡೈರೆಕ್ಟರ್ ಹರ್ಷ ಸೇರಿದಂತೆ ಚಿತ್ರತಂಡದವರೆಲ್ಲ ಒಟ್ಟಿಗೇ ಹೋಗುತ್ತಿದ್ದಾರೆ. ತಮಗಿಂತ ಮೊದಲು ಗಾನವಿ, ಆದಿತಿಯನ್ನು ಮಾತನಾಡಲು ಪ್ರೋತ್ಸಾಹಿಸುತ್ತಿರುವ ಶಿವಣ್ಣ, ಮತ್ತೊಮ್ಮೆ ತಮ್ಮ ಚಿತ್ರದ ಸಹನಟರಿಗೆ ಹೆಚ್ಚು ಸ್ಕೋಪ್ ಸಿಗುವಂತೆ ನೋಡಿಕೊಳ್ಳುತ್ತಿರುವುದು ವಿಶೇಷ.ಇತ್ತೀಚಿನ ಕೆಲವು ವಿವಾದಗಳಿಂದ ಬೇಸತ್ತಿರುವ ಅಭಿಮಾನಿಗಳಿಗೆ ವೇದದ ಸಕ್ಸಸ್ ಕೊಡುತ್ತಿರುವ ಖುಷಿಯೇ ಬೇರೆ.
ವೇದ ಚಿತ್ರತಂಡ ಇಂದು ಚಾಮರಾಜನಗರ, ಟಿ.ನರಸೀಪುರ, ಗುಂಡ್ಲುಪೇಟೆ ಹಾಗೂ ಹುಣಸೂರುಗಳಲ್ಲಿ ಚಿತ್ರಮಂದಿರಗಳಿಗೆ ಭೇಟಿ ಕೊಡಲಿದೆ. ನಾಳೆ ಕೊಳ್ಳೆಗಾಲ, ಮಳವಳ್ಳಿ, ಮದ್ದೂರು, ಮಂಡ್ಯ, ರಾಮನಗರಗಳಲ್ಲಿ ಚಿತ್ರಮಂದಿರಗಳನ್ನು ಭೇಟಿ ಮಾಡಲಿದೆ.
ತಮಿಳುನಾಡಿನಿಂದಲೂ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದು, ಬಿಡುಗಡೆಯಾದ ಎಲ್ಲ ಕಡೆ ಉತ್ತಮ ಕಲೆಕ್ಷನ್ಸ್ ಮಾಡುತ್ತಿದೆ.