ಕೆಜಿಎಫ್ ಚಾಪ್ಟರ್ 2 ಮುಗಿದ ಮೇಲೆ ಯಶ್ ತಮ್ಮ ವೃತ್ತಿ ಜೀವನದ ಬಗ್ಗೆ ಹೆಚ್ಚು ಮಾತನಾಡಿಲ್ಲ. ಯಶ್ ಹೊಸ ಸಿನಿಮಾ ಯಾವಾಗ ಅನ್ನೋ ಬಗ್ಗೆ ಇಡೀ ಇಂಡಿಯನ್ ಫಿಲ್ಮ್ ಇಂಡಸ್ಟ್ರಿಯಲ್ಲಿ ನಡೆಯುತ್ತಿರುವುದು ಗಾಸಿಪ್ಪುಗಳ ಕಾರುಬಾರು. ಕೇವಲ ಗಾಸಿಪ್ಪು. ಅವುಗಳಲ್ಲಿ ಯಾವುದು ಅಧಿಕೃತ.. ಯಾವುದು ಅನಧಿಕೃತ.. ಅದರ ಬಗ್ಗೆ ಯಶ್ ಎಲ್ಲಿಯೂ ಮಾತನಾಡಿಲ್ಲ. ಅವರಿಗೆ ಮೌನವಾಗಿದ್ದರೂ ಸುದ್ದಿಯಲ್ಲಿರೋದು ಗೊತ್ತು. ಕೆಜಿಎಫ್ 2 ಮುಕ್ತಾಯವಾಗಿ 7 ತಿಂಗಳಾಗಿದೆ. ಈ ಮಧ್ಯೆ ಫಿಲ್ಮ್ ಕಂಪೆನಿಯೊಂದಕ್ಕೆ ಸಂದರ್ಶನ ನೀಡಿದ್ದಾರೆ. ಕೆಲವು ಮಾಹಿತಿ ಹಂಚಿಕೊಂಡಿದ್ದಾರೆ. ಕೆಲವು ಸ್ಫೋಟಕ.. ಕೆಲವು ರೋಚಕ.. ಕೆಲವು ಮನಮೋಹಕ..
ನಾನು ಹಣಕ್ಕೆ ಬೆಲೆ ಕೊಡುತ್ತೇನೆ.ಕೆಜಿಎಫ್‍ಗೆ ನಾನು ಕೇವಲ ಹೀರೋ ಅಲ್ಲ. ನಿರ್ಮಾಪಕನೂ ಹೌದು. ಹೀಗಾಗಿ ಹಣ ನನ್ನನ್ನು ಖುಷಿ ಪಡಿಸುವುದಿಲ್ಲ. ಅದು ಮುಂದಿನ ನಿಲ್ದಾಣಕ್ಕೆ ಹೋಗುವುದಕ್ಕೆ ಬೇಕಾದ ಪವರ್ ಕೊಡುತ್ತೆ.
ತುಂಬಾ ಜನ ನನಗೆ ಸಿನಿಮಾಗಳನ್ನು ಹೆಚ್ಚು ಒಪ್ಪಿಕೊಳ್ಳಬೇಕೆಂದು ಸಲಹೆ ಕೊಡ್ತಾರೆ. ಆರಂಭದಲ್ಲಿ ಅಂತಹುದನ್ನೆಲ್ಲ ಮಾಡಿದ್ದೆ. ಉತ್ತರ ಕರ್ನಾಟಕದ ಸಿನಿಮಾ, ನಿರ್ಮಾಪಕರ ಸಿನಿಮಾ, ನಿರ್ದೇಶಕರ ಸಿನಿಮಾ.. ಹೀಗೇ..ಆದರೆ ಅವುಗಳನ್ನೆಲ್ಲ ದಾಟಿ ಬಂದ ಮೇಲೆ ಒಂದು ಘನತೆ ಕಾಪಾಡಿಕೊಳ್ಳಬೇಕು.
ಒಂದು ಕೆಜಿಎಫ್‍ನಿಂದ ಚಿತ್ರರಂಗ ಬದಲಿಸೋಕೆ ಆಗಲ್ಲ. ಈಗ ಕಾಂತಾರ ನೋಡಿ. ಆ ಚಿತ್ರದ ಗೆಲುವು ರಿಷಬ್ ಶೆಟ್ಟಿಯವರಿಗೆ ಸಲ್ಲಬೇಕು. ಲೂಸಿಯಾ, ಗರುಡ ಗಮನ ವೃಷಭ ವಾಹನ.. ಹೀಗೆ ಹಲವು ಚಿತ್ರಗಳು ಚಿತ್ರರಂಗವನ್ನು ಬೆಳೆಸಿವೆ. ಹಾಗೆ ನೋಡಿದರೆ ಕೆಜಿಎಫ್, ಹೈ ಬಜೆಟ್ ಸಿನಿಮಾಗಳ ಮಿಥ್‍ನ್ನು ಒಡೆದು ಹಾಕಿತು.
ನೆಪೋಟಿಸಂ ಎಂದರೆ ತಮ್ಮ ಹಿನ್ನೆಲೆಯ ಬಲದಿಂದ ಬೇರೆಯವರನ್ನು ತುಳಿಯೋದು. ಆದರೆ ಮೆರಿಟ್ ಇದ್ದರೆ ಚಿತ್ರರಂಗದಲ್ಲಿ ಯಾರು ಬೇಕಾದರೂ ಬೆಳೀಬಹುದು.
ಒಂದು ಕಾಲದಲ್ಲಿ ಇಂಡಿಯಾ ಕ್ರಿಕೆಟ್ ಟೀಂನಲ್ಲಿ 11 ಆಟಗಾರರು ಕನ್ನಡಿಗರಿದ್ದರು. ನಮ್ಮ ಹುಡುಗರಿಗೆ ಸ್ವಲ್ಪ ಸಪೋರ್ಟ್, ಮಾರ್ಕೆಟಿಂಗ್ ಸಿಕ್ಕರೆ ಇಡೀ ಇಂಡಸ್ಟ್ರಿಯನ್ನ ಆಳ್ತಾರೆ.
ಹಾಲಿವುಡ್ ನನ್ನ ಗುರಿ ಅಲ್ಲ. ಹಾಲಿವುಡ್ ನಮ್ಮ ಚಿತ್ರರಂಗದತ್ತ ತಿರುಗಿ ನೋಡಬೇಕು. ಅದು ನನ್ನ ಗುರಿ.
ಬಾಲಿವುಡ್‍ನ್ನು ಬಯ್ಯುವುದು ಬೇಡ. ಗೌರವಿಸಬೇಕು. ಇವತ್ತಿನ ಬಾಲಿವುಡ್ ಸ್ಥಿತಿಯನ್ನು ನಾವೂ ಅನುಭವಿಸಿದ್ದೇವೆ. ಸೌತ್, ನಾರ್ತ್ ಅನ್ನೋದನ್ನೆಲ್ಲ ಬದಿಗಿಟ್ಟು ಇಡೀ ಜಗತ್ತಿಗೆ ಇಂಡಿಯನ್ ಸಿನಿಮಾ ಸಾಮಥ್ರ್ಯ ಏನೆಂದು ತೋರಿಸೋಣ..
ನನ್ನ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಘೋಷಣೆ ಮಾಡುತ್ತೇನೆ ಎಂಬ ನಿರೀಕ್ಷೆ ಹಲವರಲ್ಲಿದೆ. ನಿಮ್ಮೆಲ್ಲರ ಆಸೆ ಈಡೇರಿಸುವುದು ನನ್ನ ಬಾಧ್ಯತೆಯೂ ಹೌದು. ಆದರೆ ಸಿದ್ಧತೆಯಾಗದೆ ಏನನ್ನೂ ಘೋಷಿಸಲಾರೆ. ನಿರೀಕ್ಷಿಸಲೂಬೇಡಿ.