ಸ್ಟಾರ್ ನಟರು ವರ್ಷಕ್ಕೆ ಒಂದೇ ಸಿನಿಮಾ ಮಾಡಬೇಕು.. ಅದೊಂದು ಸಿನಿಮಾಗಾಗಿಯೇ ಇಡೀ ವರ್ಷ ಕೆಲಸ ಮಾಡಬೇಕು.. ಆ ಸಿನಿಮಾ ಬಿಡುಗಡೆ ಹೊತ್ತಿನಲ್ಲಿ ಮಾತ್ರ ಅಭಿಮಾನಿಗಳಿಗೆ ದರ್ಶನ ಕೊಡಬೇಕು.. ಸ್ಟಾರ್ ಎಂದ ಮೇಲೆ ಒಂದು ಲೆವೆಲ್ ಮೈಂಟೇನ್ ಮಾಡಬೇಕು.. ಈ ಯಾವ ನಿಯಮಗಳೂ ಶಿವಣ್ಣಗೆ ಅನ್ವಯವಾಗಲ್ಲ. ಇವುಗಳಿಗೆಲ್ಲ ವಿರುದ್ಧವಾಗಿಯೇ ಹೋಗುವ ಶಿವಣ್ಣ ಒಂದರ ಹಿಂದೊಂದು ಸಿನಿಮಾ ಒಪ್ಪಿಕೊಳ್ತಾರೆ. 2022ರಲ್ಲೂ ಅಷ್ಟೆ, ಶಿವಣ್ಣ ಅಭಿನಯದ ಎರಡು ಸಿನಿಮಾ ರಿಲೀಸ್ ಆಗಿವೆ. ಬೈರಾಗಿ ಆವರೇಜ್ ಹಿಟ್ ಆದರೆ ವೇದ ಸೂಪರ್ ಹಿಟ್ ಆಗುವ ಹಾದಿಯಲ್ಲಿದೆ. ಇವುಗಳ ಮಧ್ಯೆಯೇ ಇನ್ನೂ ಒಂದು ಸಿನಿಮಾಗೆ ಯೆಸ್ ಎಂದಿದ್ದಾರೆ ಶಿವಣ್ಣ.
ಅಂದಹಾಗೆ ಶಿವಣ್ಣ ಸದ್ಯಕ್ಕೆ ಯೋಗರಾಜ್ ಭಟ್ಟರ ಕರಟಕ ದಮನಕ, ನೀ ಸಿಗೋವರೆಗೂ, ಘೋಸ್ಟ್, 45, ಸತ್ಯಮಂಗಳ ಚಿತ್ರಗಳಲ್ಲಿ ಬ್ಯುಸಿ. ತಮಿಳಿನಲ್ಲಿ ಜೈಲರ್ ಹಾಗೂ ಕ್ಯಾಪ್ಟನ್ ಮಿಲ್ಲರ್ ಚಿತ್ರಗಳಲ್ಲಿಯೂ ನಟಿಸುತ್ತಿದ್ದಾರೆ. ಇವೆಲ್ಲವುಗಳ ನಡುವೆಯೇ ಇನ್ನೊಂದು ಸಿನಿಮಾ. ಡೈರೆಕ್ಟರ್ ತೇಜಸ್ವಿ ಕೆ.ನಾಗ್. ನಿರ್ಮಾಪಕರು ಮಂಜುಳ ಶಿವಾರ್ಜುನ್.
ಕಿರುತೆರೆಯಲ್ಲಿ ಇತಿಹಾಸವನ್ನೇ ಬರೆದ ಮಜಾ ಟಾಕೀಸ್ ಹಿಂದಿನ ಕಾರಣೀಕರ್ತ ಇವರೇ. ಸೃಜನ್ ಲೋಕೇಶ್ ಜೊತೆ ಎಲ್ಲಿದ್ದೆ ಇಲ್ಲೀತನಕ.. ಎಂಬ ಚಿತ್ರವನ್ನೂ ಮಾಡಿದ್ದ ತೇಜಸ್ವಿ, ಈಗ ಶಿವಣ್ಣ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಶಿವಣ್ಣ ಮಾಸ್ ಲುಕ್ಕಿನಲ್ಲಿರುವ ಪೋಸ್ಟರ್ ಒಂದನ್ನು ರಿಲೀಸ್ ಕೂಡಾ ಮಾಡಿದ್ದಾರೆ. ಶೀಘ್ರದಲ್ಲೇ ಚಿತ್ರದ ಮಾಹಿತಿ ಹಂಚಿಕೊಳ್ಳಲಿದ್ದಾರಂತೆ.