ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ್ ಅವರ ಜೀವನ ಕಥೆ ಹಲವರಿಗೆ ಸ್ಫೂರ್ತಿ. ಪ್ರೇರಣೆ. ಮಾದರಿ. ಸಿನಿಮಾಗಳಲ್ಲಿ ಅತ್ಯುತ್ತಮ ಅಭಿನಯ, ಕಿರಿಯರಿಗೆ ಪ್ರೋತ್ಸಾಹ, ಹಿರಿಯರಿಗೆ ಗೌರವ.. ಎಡಗೈಗೆ ಕೊಟ್ಟಿದ್ದು ಬಲಗೈಗೆ ಗೊತ್ತಾಗದಂತೆ ಮಾಡಿದ್ದ ಸಮಾಜಸೇವೆ.. ಇವೆಲ್ಲವೂ ಪುನೀತ್ ಅವರನ್ನು ಅಮರರನ್ನಾಗಿಸಿವೆ. ಕರ್ನಾಟಕ ರಾಜ್ಯ ಸರ್ಕಾರ ಕರ್ನಾಟಕ ರತ್ನ ಪುರಸ್ಕಾರವನ್ನೂ ನೀಡಿ ಗೌರವಿಸಿದೆ. ಈಗ ಪುನೀತ್ ರಾಜಕುಮಾರ್ ಪಠ್ಯ ಪುಸ್ತಕವಾಗಿದ್ದಾರೆ.
ಬೆಂಗಳೂರು ವಿವಿಯ ಬಿಕಾಂ ವಿಭಾಗದ 3ನೇ ಸೆಮಿಸ್ಟರ್ ಕನ್ನಡದಲ್ಲಿ ಪುನೀತ್ ಪಠ್ಯಕ್ಕೆ ಸ್ಥಾನ ಸಿಕ್ಕಿದೆ. ಪತ್ರಕರ್ತ ಶರಣು ಹುಲ್ಲೂರು ಬರೆದಿರುವ, ಖ್ಯಾತ ಪ್ರಕಾಶನ ಸಂಸ್ಥೆ ಸಾವಣ್ಣ ಪ್ರಕಾಶನದಿಂದ ಮುದ್ರಣಗೊಂಡಿದ್ದ ನೀನೇ ರಾಜಕುಮಾರ ಕೃತಿಯ ಒಂದು ಅಧ್ಯಾಯ ಲೋಹಿತ್ ಎಂಬ ಮರಿಯುದ್ಧ ಭಾಗವನ್ನು ಪಠ್ಯಕ್ಕೆ ಸೇರಿಸಲಾಗಿದೆ. ಡಾ.ಅಮರೇಂದ್ರ ಶೆಟ್ಟಿ, ಡಾ.ಕ.ನಿಂ.ಹೊಯ್ಸಳಾದಿತ್ಯ, ಡಾ.ಶಿವರಾಜ ಬಿ.ಇ. ಹಾಗೂ ಡಾ.ರಘುನಂದನ್ ಬಿ.ಆರ್. ಪಠ್ಯದ ಸಂಪಾದಕರು. ಪಠ್ಯ ಪುಸ್ತಕದಲ್ಲಿ ಲೋಹಿತ್ ಅವರ ಬಾಲ್ಯ ಜೀವನವಿದೆ.
ನೀನೇ ರಾಜಕುಮಾರ ಕೃತಿ ಬಿಡುಗಡೆಯಾದಾಗಿನಿಂದಲೂ ಅದ್ಭುತ ಪ್ರತಿಕ್ರಿಯೆ ಪಡೆದಿತ್ತು. ಬಯೋಗ್ರಫಿಗಳಲ್ಲೇ ಅತೀ ಹೆಚ್ಚು ಮಾರಾಟವಾದ ಕನ್ನಡದ ಕೃತಿ ಎಂಬ ದಾಖಲೆ ಬರೆದು, ಇತ್ತೀಚೆಗಷ್ಟೇ ಕೃತಿಯ 4ನೇ ಮುದ್ರಣ ಬಿಡುಗಡೆಯಾಗಿತ್ತು. ಅಶ್ವಿನಿ ಪುನೀತ್ ರಾಜಕುಮಾರ್ ಅವರು 4ನೇ ಮುದ್ರಣದ ಪ್ರತಿಯನ್ನು ಬಿಡುಗಡೆ ಮಾಡಿದ್ದರು. ಕೃತಿಗೆ ಪತ್ರಕರ್ತರಾದ ಮುರಳೀಧರ ಖಜಾನೆ ಮುನ್ನುಡಿ ಬರೆದಿದ್ದರೆ, ಪತ್ರಕರ್ತ ಹಾಗೂ ಸಾಹಿತಿಯೂ ಆಗಿರುವ ಜೋಗಿ ಹಿನ್ನುಡಿ ಬರೆದಿದ್ದರು.