ವಿಜಯಾನಂದ ಸಂಕೇಶ್ವರ್ ಅವರ ಜೀವನವೇ ಸ್ಫೂರ್ತಿದಾಯಕ ಕಥೆ. ಅವರ ಜೀವನದ ಬಗ್ಗೆ ಕೇಳಿದ್ದೆವು. ಈ ಚಿತ್ರದಲ್ಲಿ ಅದ್ಭುತವಾಗಿ ತೋರಿಸಲಾಗಿದೆ. ಚಿತ್ರ ನೋಡಿದಾಗ ಶೂನ್ಯದಿಂದ ಸಾಧನೆ, ಶ್ರಮದಿಂದ ಯಶಸ್ಸಿನ ಶಿಖರ ತಲುಪಬಹುದು ಎಂಬ ಕಥೆಯನ್ನು ವಾಸ್ತವದಲ್ಲಿ ಹೇಳಲಾಗಿದೆ. ನಿಜಕ್ಕೂ ಇದೊಂದು ಸ್ಫೂರ್ತಿದಾಯಕ ಸಿನಿಮಾ. ಈ ಮಾತನ್ನು ಹೇಳಿದ್ದು ಮೂರುಸಾವಿರ ಮಠದ ಮಠಾಧೀಶರಾದ ಡಾ.ಶ್ರೀ ಗುರುಸಿದ್ದಾರಾಜ ಯೋಗೀಂದ್ರ ಜಗದ್ಗುರು.
ಡಾ.ವಿಜಯ ಸಂಕೇಶ್ವರ ಅವರ ಸಿನಿಮಾ ಈ ವಾರ ರಿಲೀಸ್ ಆಗಿ ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರ ನೋಡಿದವರು ವಿಜಯ ಸಂಕೇಶ್ವರರ ಬಗ್ಗೆ ಇದ್ದ ಅಭಿಮಾನವನ್ನು ನೂರ್ಮಡಿಗೊಳಿಸಿಕೊಂಡಿದ್ದಾರೆ. ಮಠದ ಶ್ರೀಗಳು ಸಿನಿಮಾವನ್ನು ಪ್ರಾದ್ಯಾಪಕರು ಹಾಗೂ ವಿದ್ಯಾರ್ಥಿಗಳೊಂದಿಗೆ ನೋಡಿ ಚಿತ್ರದ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು.
ಮೂರು ಸಾವಿರ ಮಠದ ವಿದ್ಯಾವರ್ಧಕ ಸಂಘದ ನಿರ್ದೇಶಕ ಸದಾನಂದ ಡಂಗನವರ ಚಿತ್ರಕ್ಕೆ ಸರ್ಕಾರ ಶೇ.100ರಷ್ಟು ತೆರಿಗೆ ವಿನಾಯಿತಿ ಘೋಷಿಸಬೇಕು. ಈ ಸಿನಿಮಾ ಎಲ್ಲ ಯುವಜನತೆಗೆ ಸ್ಫೂರ್ತಿ, ಮಾದರಿ, ಪ್ರೇರಣೆ. ಸಂಕೇಶ್ವರರು ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧಿಸಿದ ಸಾಧನೆ ಪ್ರತಿಯೊಬ್ಬರಿಗೂ ಸ್ಫೂರ್ತಿ ಎಂದು ಶ್ಲಾಘಿಸಿದರು. ಹುಬ್ಬಳ್ಳಿಯ ಪಿವಿಆರ್‍ನಲ್ಲಿ ಸ್ವಾಮೀಜಿಗಳ ಜೊತೆ ಸಂಘದ ಚೇರ್ಮನ್ ಅರವಿಂದ ಕುಬಸದ, ನಿರ್ದೇಶಕ ಸದಾನಂದ ಡಂಗನವರ, ಪ್ರಿನ್ಸಿಪಾಲರಾದ ಬಸವರಾಜ ಸಾಲಿಮಠ, ರಾಜು ಟಿ.ಪವಾರ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಸಿನಿಮಾ ವೀಕ್ಷಿಸಿದರು.