ಇದು 96ರಲ್ಲಿ ಶುರುವಾಗುವ ಕಥೆ. ಕೊನೆಯಾಗುವುದು ಎಲ್ಲಿ? ಸಿನಿಮಾ ನೋಡಿಯೇ ನಿರ್ಧಾರ ಮಾಡಬೇಕು. ಪದವಿ ಪೂರ್ವ ಎಂಬುದು ಪ್ರತಿಯೊಬ್ಬರ ಜೀವನದ ವಿಶೇಷ ಜೀವನಘಟ್ಟ. ಆ ಹರೆಯದಲ್ಲಿ ಸ್ನೇಹಿತರೇ ಲೋಕ. ಗೆಳೆಯರ ಬಳಗ ಕೊಡುವ ಸಂತೋಷ ಇನ್ನೆಲ್ಲೂ ಸಿಕ್ಕಲ್ಲ. ಅಂತಹ ವಯಸ್ಸಿನಲ್ಲಿ ಮಗನನ್ನು ಡಾಕ್ಟರ್ ಮಾಡಬೇಕೆಂದುಕೊಂಡಿರುವ ಅಪ್ಪ, ಪ್ರೀತಿಸಿದಳ ಹೃದಯದಲ್ಲಿ ಸ್ಥಾನ ಪಡೆಯಬೇಕು ಎಂಬ ಹುಡುಗ, ಪ್ರೀತಿಸಿದವನು ಕೆಟ್ಟ ಗೆಳೆಯರಿಂದ ದೂರವಾಗಬೇಕು ಎಂಬ ಹುಡುಗಿ.. ಗೆಳೆಯನನ್ನೇ ದೂರ ಇಟ್ಟರೆ ನಾನು ಹೇಗೆ ಒಳ್ಳೆಯವನಾಗುತ್ತೇನೆ.. ಎಂಬ ಹುಡುಗ.. ಬಿಸಿಬೇಳೆ ಬಾತ್.. ಪ್ರೀತಿಸಿದವಳಿಗಾಗಿ ಪರದಾಡುವುದಕ್ಕಿಂತ ಡಾಕ್ಟರ್ ಆಗುವುದೇ ಸುಲಭ ಎಂದುಕೊಳ್ಳೋ ಯುವಕ.. ಪದವಿ ಪೂರ್ವ ಚಿತ್ರದಲ್ಲೊಂದು ಉತ್ತಮ ಕಥೆಯಿದೆ ಎಂಬ ಸೂಚನೆಯನ್ನೂ ನಿರ್ದೇಶಕ ಹರಿಪ್ರಸಾದ್ ಜಯಣ್ಣ ಕೊಟ್ಟಿದ್ದಾರೆ.
ಯೋಗರಾಜ್ ಭಟ್, ರವಿ ಶಾಮನೂರು ನಿರ್ಮಾಣದ ಚಿತ್ರವಿದು. ಶಾಮನೂರು ಕುಟುಂಬದ ಪೃಥ್ವಿ ಈ ಚಿತ್ರದ ಮೂಲಕ ಹೀರೋ ಆಗಿದ್ದಾರೆ. ಚಾಕಲೇಟ್ ಬಾಯ್ ಲುಕ್, ಚೆಂದದ ಡ್ಯಾನ್ಸ್, ಭಾವನೆಗಳನ್ನೂ ವ್ಯಕ್ತಪಡಿಸುವ ಪರಿಯಲ್ಲಿ ಭರವಸೆ ಹುಟ್ಟಿಸುತ್ತಾರೆ. ನಾಯಕಿ ಅಂಜಲಿ ಅನೀಶ್ ಮತ್ತು ಯಶ ಶಿವಕುಮಾರ್, ಶರತ್ ಲೋಹಿತಾಶ್ವ, ರಂಗಾಯಣ ರಘು.. ಎಲ್ಲರ ಪಾತ್ರವೂ ಟ್ರೇಲರಿನಲ್ಲೇ ಗಮನ ಸೆಳೆಯುವಂತಿದೆ. ಅರ್ಜುನ್ ಜನ್ಯಾ ಹಾಡುಗಳು ಈಗಾಗಲೇ ಕಿವಿಗೆ ತಂಪು ಮಾಡಿವೆ. ಡಿಸೆಂಬರ್ 30ಕ್ಕೆ ವರ್ಷದ ಕೊನೆಯ ಚಿತ್ರವಾಗಿ ಪದವಿ ಪೂರ್ವ ರಿಲೀಸ್ ಆಗುತ್ತಿದೆ.