ರಕ್ಷಿತ್ ಮತ್ತು ರಿಷಬ್ ಇಬ್ಬರೂ ಜೀವದ ಗೆಳೆಯರು. ಒಬ್ಬರ ಸಾಧನೆಯನ್ನು ಮತ್ತೊಬ್ಬರು ಗೌರವಿಸುವುದನ್ನು ನೋಡುವುದೇ ಒಂದು ಆನಂದ. ಇತ್ತೀಚೆಗೆ ರಕ್ಷಿತ್ ಶೆಟ್ಟಿಯವರ ಪರಂವಾ ಬ್ಯಾನರ್‍ನಲ್ಲಿ ಬ್ಯಾಚುಲರ್ ಪಾರ್ಟಿ ಸಿನಿಮಾ ಸೆಟ್ಟೇರಿತ್ತು. ಅಭಿಜಿತ್ ಮಹೇಶ್ ನಿರ್ದೇಶನದ ಬ್ಯಾಚುಲರ್ ಪಾರ್ಟಿ ಚಿತ್ರದಲ್ಲಿ ರಿಷಬ್ ನಟಿಸಲು ಓಕೆ ಎಂದಿದ್ದರು. ಕಿರಿಕ್ ಪಾರ್ಟಿಯಲ್ಲೂ ನಾವಿಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದೆವು. ನನಗೆ ನಿರ್ದೇಶಕರು ಒಳ್ಳೆ ಪಾತ್ರ ಕೊಟ್ಟಿದ್ದಾರೆ ಎಂದಿದ್ದ ರಿಷಬ್ ಶೆಟ್ಟಿ, ಸಿನಿಮಾದಿಂದ ಹೊರಬಂದಿದ್ದಾರೆ ಎಂಬ ಸುದ್ದಿ ಹರಡಿದೆ.
ರಿಷಬ್ ಶೆಟ್ಟಿ ಜಾಗಕ್ಕೆ ಲೂಸ್ ಮಾದ ಯೋಗಿ ರೀಪ್ಲೇಸ್ ಆಗಿದ್ದಾರೆ ಎಂಬ ಸುದ್ದಿಯಿದೆ. ಬ್ಯಾಚುಲರ್ ಪಾರ್ಟಿ ಕಾಮಿಡಿ ಸಬ್ಜೆಕ್ಟ್ ಸಿನಿಮಾ. ದಿಗಂತ್, ಅಚ್ಯುತ್ ಕುಮಾರ್, ಪವನ್ ಕುಮಾರ್, ಪ್ರಕಾಶ್ ತುಮ್ಮಿನಾಡು, ಬಾಲಾಜಿ ಮನೋಹರ್.. ಹೀಗೆ ಹಲವರು ನಟಿಸುತ್ತಿರೋ ಸಿನಿಮಾ. ಆದರೆ ರಿಷಬ್ ಶೆಟ್ಟಿ ಔಟ್ ಹಾಗೂ ಯೋಗಿ ಇನ್ ಎಂಬ ಬಗ್ಗೆ ಪರಂವಾ ಸ್ಟುಡಿಯೋಸ್‍ನವರೇನೂ ಅಧಿಕೃತ ಮಾಹಿತಿ ನೀಡಿಲ್ಲ.
ಕಾಂತಾರ ಚಿತ್ರದ ಯಶಸ್ಸಿನ ನಂತರ ರಿಷಬ್ ಶೆಟ್ಟಿ ಆಯ್ಕೆಯ ರೀತಿ ನೀತಿ ಬದಲಾದ ಕಾರಣಕ್ಕಾಗಿಯೇ ಈ ಬದಲಾವಣೆ ಎನ್ನಲಾಗಿದೆ. ಕಾಂತಾರದ ಶಿವನ ಪಾತ್ರದ ಇಮೇಜ್, ಸ್ಟಾರ್ ಡಂ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂಬ ಸುದ್ದಿಯಿದೆ. ರಕ್ಷಿತ್ ಮತ್ತು ರಿಷಬ್, ಇಬ್ಬರ ಮಧ್ಯೆ ಮಿಸ್ ಅಂಡರ್‍ಸ್ಟಾಂಡಿಂಗ್ ಪ್ರಶ್ನೆಯೇ ಉದ್ಭವಿಸಲ್ಲ. ರಿಷಬ್‍ಗೆ ಒಳ್ಳೆಯದಾಗುತ್ತದೆ ಎಂದರೆ ರಕ್ಷಿತ್ ಅವರೇ ಮುಂದೆ ನಿಂತು ಸಹಾಯ ಮಾಡುತ್ತಾರೆ. ಅದೇ ರೀತಿ ರಿಷಬ್ ಶೆಟ್ಟಿ. ಹೀಗಾಗಿ ಇಬ್ಬರು ಕೂಡಿಯೇ ಈ ನಿರ್ಧಾರ ತೆಗೆದುಕೊಂಡಿರಬಹುದು ಎನ್ನುತ್ತಿವೆ ಪರಂವಾ ಮೂಲಗಳು. ಅಧಿಕೃತ ಮಾಹಿತಿಗಾಗಿ ಕಾಯಬೇಕಷ್ಟೆ.