ರಿಷಬ್ ಶೆಟ್ಟಿ ಕಾಂತಾರ ನಂತರ ಮುಂದೇನು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಕಾಂತಾರ ನಂತರ ಮತ್ತೊಮ್ಮೆ ಕಾಂತಾರ. ಅಷ್ಟೆ. ರಿಷಬ್ ಶೆಟ್ಟಿ ಮತ್ತು ತಂಡ ಕಾಂತಾರ ಚಿತ್ರದ ಸೀಕ್ವೆಲ್ ಮಾಡಲು ನಿರ್ಧರಿಸಿದ್ದು, ಕಾಂತಾರ 2 ಸ್ಕ್ರಿಪ್ಟ್ ವರ್ಕ್ ಶುರುವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ಕಾಂತಾರ 2 ಬರುತ್ತಾ ಎನ್ನುವ ಪ್ರಶ್ನೆಯ ಜೊತೆಯಲ್ಲೇ ದೈವಗಳ ಕುರಿತು ಸಿನಿಮಾ ಮಾಡಲು ಕೆಲವರು ಆಕ್ಷೇಪವನ್ನೂ ವ್ಯಕ್ತ ಪಡಿಸಿದ್ದರು. ಹೀಗಾಗಿ ಕಾಂತಾರ 2 ಬಗ್ಗೆ ಸಹಜವಾಗಿಯೇ ಕುತೂಹಲ ಕೂಡ ಮೂಡಿತ್ತು. ರಿಷಬ್ ಶೆಟ್ಟಿ ಪಂಜುರ್ಲಿ ದೈವದ ಮೊರೆ ಹೋಗಿದ್ದರು. ದೈವ ಹಲವು ಷರತ್ತುಗಳೊಂದಿಗೆ ಒಪ್ಪಿಗೆ ನೀಡಿದೆ ಎಂದು ತಿಳಿದು ಬಂದಿದೆ.
ಮಂಗಳೂರು ಹೊರವಲಯದಲ್ಲಿ ನಡೆದ ಪಂಜುರ್ಲಿ ಕೋಲದಲ್ಲಿ ಕಾಂತಾರ ನಿರ್ದೇಶಕ ರಿಷಬ್ ಶೆಟ್ಟಿ, ನಿರ್ಮಾಪಕ ವಿಜಯ್ ಕಿರಗಂದೂರ್, ನಾಯಕಿ ಗೌತಮಿ ಗೌಡ ಸೇರಿದಂತೆ ಬಹುತೇಕ ಸದಸ್ಯರು ಹಾಜರಿದ್ದರು. ಕದ್ರಿ ಮಂಜುನಾಥೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣ ಅಡಿಗ ಅವರ ನೇತೃತ್ವದಲ್ಲಿ ನಡೆದ ಅಣ್ಣಪ್ಪ ಪಂಜುರ್ಲಿ ಕೋಲಾದಲ್ಲಿ ಕಾಂತರ 2 ಸಿನಿಮಾ ಮಾಡುವ ಕುರಿತು ರಿಷಬ್ ಒಪ್ಪಿಗೆ ಕೇಳಿದ್ದರು.
ದೈವದ ಜೊತೆಗಿನ ಮಾತುಕತೆಯಲ್ಲಿ ದೈವ ಹಲವು ಸೂಚನೆಗಳ ಜೊತೆ ಸಿನಿಮಾ ಮಾಡಲು ಅನುಮತಿ ನೀಡಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಸಿನಿಮಾದ ಕಥೆ ಮಾಡಲು ರಿಷಬ್ ಶೆಟ್ಟಿ ಅಂಡ್ ಟೀಮ್ ಹುರುಪಿನಿಂದಲೇ ತಯಾರಾಗಿದೆ. ಈ ಕುರಿತು ಚಿತ್ರತಂಡ ಅಧಿಕೃತವಾಗಿ ಮಾಹಿತಿ ನೀಡಿಲ್ಲ. ಆದರೆ ಮೂಲಗಳ ಪ್ರಕಾರ ಕೆಲವೇ ದಿನಗಳಲ್ಲಿ ಕಾಂತಾರ 2 ಸೆಟ್ಟೇರಲಿದೆ ಎನ್ನಲಾಗಿದೆ.