ಬೇರೆ ಬೇರೆ ಪ್ರಾಜೆಕ್ಟ್‍ಗಳಿಗೆ ಕೆಲಸ ಮಾಡುತ್ತಿದ್ದಾಗ ನಟ ನಿಹಾಲ್ ಅವರೇ ಕೊಟ್ಟ ಐಡಿಯಾ ಇದು. ವಿಜಯ್ ಸಂಕೇಶ್ವರರ ಬಯೋಪಿಕ್ ಏಕೆ ಮಾಡಬಾರದು ಎಂದು ಕೇಳಿದರು. ಹೌದಲ್ವಾ ಎನಿಸಿತು. ನೋಡುತ್ತಾ ಹೋದರೆ.. ಥ್ರಿಲ್ ಆಗುವಂತ ಕತೆ ಇದೆ. ಕೋಟಿ ಕೋಟಿ ಹಣ ಇಟ್ಟುಕೊಂಡು ಇಂಡಸ್ಟ್ರಿಗೆ ಬಂದವರಲ್ಲ. ಜೀರೋದಿಂದ ಹೀರೋ ಆದವರು. ದೇಶವೇ ಮೆಚ್ಚುವ ಕನ್ನಡಿಗನೊಬ್ಬನ ಸಾಧನೆಯ ಕಥೆಯನ್ನು ನಾವೇಕೆ ಹೇಳಬಾರದು ಎನ್ನಿಸಿತು. ಸಿನಿಮಾ ಶುರುವಾಯಿತು ಎನ್ನುತ್ತಾರೆ ರಿಷಿಕಾ ಶರ್ಮ.
ಸಿನಿಮಾ ಶುರುವಾಗಿದ್ದು ವಿಆರ್‍ಎಲ್ ಸಂಸ್ಥೆಯಿಂದಲ್ಲ. ಬೇರೆ ನಿರ್ಮಾಪಕರಿದ್ದರು. ಅವರೂ ಕೂಡಾ ಸಂಕೇಶ್ವರರ ಅಭಿಮಾನಿಗಳೇ. ಆನಂದ್ ಸಂಕೇಶ್ವರ ಅವರು ಸಿನಿಮಾ ಇಂಡಸ್ಟ್ರಿಗೆ ಬರುತ್ತೇನೆ ಎಂದಾಗ ತಮ್ಮ ತಂದೆಯ ಕಥೆಯನ್ನೇ ಏಕೆ ಸಿನಿಮಾ ಮಾಡಬಾರದು ಎಂದುಕೊಂಡರು. ಆ ನಿರ್ಮಾಪಕರನ್ನೂ ಕೇಳಿದರು. ಅವರೂ ಖುಷಿಯಿಂದಲೇ ಓಕೆ ಎಂದರು. ಸಿನಿಮಾ ಶುರುವಾಯಿತು ಎನ್ನುತ್ತಾರೆ ರಿಷಿಕಾ.
ನಿಹಾಲ್ ಕೂಡಾ ಉತ್ತರ ಕರ್ನಾಟಕದವರೇ. ಅವರಿಗೂ ಸಂಕೇಶ್ವರ ಅಂದರೆ ಸ್ಫೂರ್ತಿ. ಸಿರಿ ಪ್ರಹ್ಲಾದ್ ಕೂಡಾ ಉತ್ತರ ಕರ್ನಾಟಕದ ಹುಡುಗಿಯೇ. ಬಹುತೇಕ ಸಿನಿಮಾದಲ್ಲಿ ಉತ್ತರ ಕರ್ನಾಟಕದ ಮಂದಿಯೇ ಹೆಚ್ಚಿದ್ದಾರೆ. ನಿರ್ದೇಶಕಿ ರಿಷಿಕಾ ಶರ್ಮ ನಿರ್ದೇಶನವನ್ನಷ್ಟೇ ಅಲ್ಲ, ಕಾಸ್ಟ್ಯೂಮ್ ಹಾಗೂ ಆರ್ಟ್ ಡೈರೆಕ್ಷನ್ ಕೂಡಾ ನಿಭಾಯಿಸಿದ್ದಾರೆ. ಹಲವು ಕನಸುಗಳಿಗೆ ಜೀವ ಕೊಟ್ಟ, ಹಲವು ಕನಸುಗಾರರಿಗೆ ಸ್ಫೂರ್ತಿ ನೀಡಿದ ವಿಜಯ ಸಂಕೇಶ್ವರರ ಜೀವನಗಾಥೆ ವಿಜಯಾನಂದ ಇಂದಿನಿಂದ ಥಿಯೇಟರುಗಳಲ್ಲಿ ಕಂಗೊಳಿಸಲಿದೆ.