ಇವನು ಒಳ್ಳೆಯವನ ತರಾ ಇರೋ ಕೆಟ್ಟವನೋ.. ಕೆಟ್ಟವನ ತರಾ ಇರೋ ಒಳ್ಳೆಯವನೋ.. ಡೈಲಾಗ್‍ನೊಂದಿಗೆ ಟ್ರೇಲರ್ ಮುಗಿಯುತ್ತದೆ. ಟ್ರೇಲರ್ ನೋಡಿದವರಿಗೂ ಕಥೆಯ ಬಗ್ಗೆ ಅಂಥಾದ್ದೊಂದು ಕುತೂಹಲ ಹುಟ್ಟಿಸುವಲ್ಲಿ ಗೆಲ್ಲುತ್ತದೆ ಬಾಂಡ್ ರವಿ ಟ್ರೇಲರ್. ಪ್ರಮೋದ್ ನಟಿಸಿರೋ ಚಿತ್ರಕ್ಕೆ ಎಸ್.ಪಿ.ಪ್ರಜ್ವಲ್ ಎಂಬುವರು ನಿರ್ದೇಶನ ಮಾಡಿದ್ದಾರೆ. ಡಿ.9ಕ್ಕೆ ಬಿಡುಗಡೆಯಾಗುತ್ತಿರೋ ಬಾಂಡ್ ರವಿ ಚಿತ್ರಕ್ಕೆ ನರಸಿಂಹ ಮೂರ್ತಿ ನಿರ್ಮಾಪಕರು.
ಚಿತ್ರದಲ್ಲಿ ಪ್ರಮೋದ್, ಪುನೀತ್ ರಾಜಕುಮಾರ್ ಅಭಿಮಾನಿಯಾಗಿ ನಟಿಸಿದ್ದಾರೆ. ಜೈಲಿನಲ್ಲಿ ಖೈದಿ, ಬೀದಿಯಲ್ಲಿ ರೌಡಿ, ರಾಜಕಾರಣಿಗಳು ಆಫೀಸರುಗಳಿಗೂ ನಡುಕ ಹುಟ್ಟಿಸುವ ಬಾಂಡ್ ರವಿ, ಜೈಲಿನಲ್ಲಿ ದಂಧೆಯನ್ನೇ ನಡೆಸುತ್ತಾನೆ. ಆದರೆ ಪ್ರೀತಿಯ ಎದುರು ಶರಣಾಗುವ ರವಿಯ ವ್ಯಕ್ತಿತ್ವ ನಿಜಕ್ಕೂ ಏನು ಎನ್ನುವ ಕುತೂಹಲ ಸೃಷ್ಟಿಸಿ ಟ್ರೇಲರ್ ಮುಗಿಸುತ್ತಾರೆ ಪ್ರಜ್ವಲ್.
ರತ್ನನ್ ಪ್ರಪಂಚ ನಂತರ ಪ್ರಮೋದ್ ಸೋಲೋ ಆ್ಯಕ್ಷನ್ ಹೀರೋ ಆಗಿ ನಟಿಸಿರೋ ಸಿನಿಮಾ ಬಾಂಡ್ ರವಿ. ಪ್ರಮೋದ್ ಎದುರು ಕಾಜಲ್ ಕುಂದರ್ ನಾಯಕಿಯಾಗಿ ನಟಿಸಿದ್ದಾರೆ. ಈ ಆಕ್ಷನ್ ಥ್ರಿಲ್ಲರ್ ಚಿತ್ರಕ್ಕೆ ಮನೋಮೂರ್ತಿ ಸಂಗೀತವಿದೆ. ರವಿಕಾಳೆ, ಧರ್ಮ, ವಿಜಯ್ ಚೆಂಡೂರು, ಶೋಭರಾಜ್ ಮೊದಲಾದವರು ಚಿತ್ರದಲ್ಲಿ ನಟಿಸಿದ್ದಾರೆ.