ಶಿವರಾಜ್ ಕುಮಾರ್ ಕನ್ನಡ ಚಿತ್ರರಂಗದವರು ಕರೆಯೋದೇ ಶಿವಣ್ಣ ಅಂಥಾ. ಇಂತಹ ಶಿವಣ್ಣ 125ನೇ ಸಿನಿಮಾ ರಿಲೀಸ್ ಹೊತ್ತಲ್ಲಿಯೂ ಬಿಡುವಿಲ್ಲದೆ ಕೆಲಸ ಮಾಡುತ್ತಿದ್ದಾರೆ. ಒಂದೆಡೆ ತಮ್ಮದೇ ನಿರ್ಮಾಣದ ವೇದದ ಬಿಡುಗಡೆ ಬ್ಯುಸಿಯಲ್ಲಿರೋ ಶಿವಣ್ಣ, ಮತ್ತೊಂದೆಡೆ ಘೋಸ್ಟ್, ಕರಟಕ ದಮನಕ, ನೀ ಸಿಗೋವರೆಗೂ.. ಅಶ್ವತ್ಥಾಮ, ಸತ್ಯಮಂಗಳ, 45 ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಜೊತೆಯಲ್ಲಿಯೇ ರಜನಿಕಾಂತ್ ಜೊತೆ ಜೈಲರ್ ಚಿತ್ರದಲ್ಲಿಯೂ ನಟಿಸುತ್ತಿದ್ದಾರೆ. ಅದು ತಮಿಳಿನ ಸಿನಿಮಾ. ಶಿವಣ್ಣ ಹೀರೋ ಆಗಿ ನಟಿಸುತ್ತಿಲ್ಲ. ಇದರ ಜೊತೆಯಲ್ಲೇ ಮತ್ತೊಂದು ತಮಿಳು ಸಿನಿಮಾಗೆ ಯೆಸ್ ಎಂದಿದ್ದಾರೆ.
ಧನುಷ್ ನಟನೆಯ ಹೊಸ ಚಿತ್ರ ಕ್ಯಾಪ್ಟನ್ ಮಿಲ್ಲರ್ ಚಿತ್ರದಲ್ಲಿ ಧನುಷ್ ಅಣ್ಣನ ಪಾತ್ರದಲ್ಲಿ ಶಿವಣ್ಣ ಕಾಣಿಸಿಕೊಳ್ಳುತ್ತಿದ್ದಾರೆ. ಕ್ಯಾಪ್ಟನ್ ಮಿಲ್ಲರ್ ಸ್ವಾತಂತ್ರ್ಯ ಪೂರ್ವದ ಕಥೆ ಹೊಂದಿದ್ದು, ಚಿತ್ರದಲ್ಲಿ ತಮಗೆ ಒಂದು ಪಾತ್ರ ಮಾಡುವಂತೆ ಕರೆ ಬಂದಿದೆ ಎನ್ನುವುದನ್ನು ಶಿವಣ್ಣ ಹೇಳಿಕೊಂಡೂ ಇದ್ದರು. ಚಿತ್ರ ತಂಡದಿಂದ ಅಧಿಕೃತ ಮಾಹಿತಿ ಇನ್ನೂ ಬಂದಿಲ್ಲವಾದರೂ, ಶಿವಣ್ಣ ಧನುಷ್ ಅಣ್ಣನಾಗುವುದು ಬಹುತೇಕ ಪಕ್ಕಾ ಎನ್ನುತ್ತಿವೆ ಮೂಲಗಳು.