ಅಭೂತಪೂರ್ವ ಯಶಸ್ಸು ಕಂಡ ಕಾಂತಾರ ಚಿತ್ರ ಈಗಾಗಲೇ ಬಿಡುಗಡೆಯಾದ ಎಲ್ಲ ಚಿತ್ರಮಂದಿರಗಳಲ್ಲಿ 50 ದಿನ ಪ್ರದರ್ಶನ ಕಂಡು ದಾಖಲೆ ಬರೆದಿದೆ. ಕನ್ನಡದಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ, ಅತೀ ಹೆಚ್ಚು ಜನ ನೋಡಿದ ಸಿನಿಮಾ, ಅತೀ ಹೆಚ್ಚು ಶೋ ಕಂಡ ಸಿನಿಮಾ.. ಹೀಗೆ ಹಲವು ದಾಖಲೆಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ. ರಿಷಬ್ ಶೆಟ್ಟಿ ಡಿವೈನ್ ಸ್ಟಾರ್ ಆಗಿದ್ದರೆ, ಸಪ್ತಮಿ ಗೌಡ ಕರ್ನಾಟಕದ ಕ್ರಷ್ ಆಗಿದ್ದಾರೆ. ಹಿಂದಿಯಲ್ಲಿ ಕೂಡಾ ದಾಖಲೆ ಬರೆದು ಪುಷ್ಪ ದಾಖಲೆಯನ್ನೂ ಹಿಂದಿಕ್ಕಿದೆ. ಒಟಿಟಿಯಲ್ಲಿ ರಿಲೀಸ್ ಆಗಿದ್ದರೂ, ಚಿತ್ರಮಂದಿರದಲ್ಲಿ ಕ್ರೇಜ್ ಕಡಿಮೆಯಾಗಿಲ್ಲ.
ಕನ್ನಡ ಭಾಷೆಯಲ್ಲಿ ಯಶಸ್ಸು ಗಳಿಸುತ್ತಿದ್ದಂತೆಯೇ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಯಲ್ಲಿಯೂ ಕಾಂತಾರವನ್ನು ಬಿಡುಗಡೆ ಮಾಡಲಾಯಿತು. ಅಲ್ಲಿಯೂ ಸೂಪರ್ ಡ್ಯೂಪರ್ ಬಂಪರ್ ಸಕ್ಸಸ್. ಇದೀಗ ತುಳು ಆವೃತ್ತಿಯು ಕೂಡ ಕರ್ನಾಟಕದಾದ್ಯಂತ ಸುಮಾರು 50 ಕ್ಕೂ ಅಧಿಕ ಸ್ಕ್ರೀನ್ಗಳಲ್ಲಿ ಬಿಡುಗಡೆಯಾಗಲಿದೆ. ಜೊತೆಗೆ ಕನ್ನಡ ಆವೃತ್ತಿಯಲ್ಲಿಯೂ 50 ಹೆಚ್ಚುವರಿ ಚಿತ್ರಮಂದಿರಗಳೊಂದಿಗೆ 250 ಥಿಯೇಟರ್ಗಳಲ್ಲಿ ಪ್ರದರ್ಶನ ಕಾಣಲಿದೆ.
ಸಿನಿಮಾದಲ್ಲಿನ ವರಾಹ ರೂಪಂ ಹಾಡನ್ನು ಥಿಯೇಟರ್ ಮತ್ತು ಒಟಿಟಿ ಆವೃತ್ತಿಯಲ್ಲಿ ಬದಲಿಸಲಾಗಿದೆ. ಆದರೆ ಇದು ಚಿತ್ರದ ಕಲೆಕ್ಷನ್ ಮತ್ತು ಕ್ರೇಜ್ ಮೇಲೆ ಯಾವ ಪರಿಣಾಮವನ್ನೂ ಬೀರಿಲ್ಲ. ಜನ ಬೇಸರಗೊಂಡಿದ್ದರೂ ಕಾಂತಾರವನ್ನು ನೋಡುತ್ತಿದ್ದಾರೆ.
ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲಂಸ್ ನಿರ್ಮಿಸಿರುವ ಈ ಚಿತ್ರದಲ್ಲಿ ಸಪ್ತಮಿ ಗೌಡ ನಾಯಕಿಯಾಗಿ ನಟಿಸಿದ್ದಾರೆ ಮತ್ತು ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ಪ್ರಸಾದ್ ತೂಮಿನಾಡ್, ಸ್ವರಾಜ್ ಶೆಟ್ಟಿ ಮತ್ತು ಮಾನಸಿ ಸುಧೀರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿರುವ ಕಾಂತಾರ ತುಳು ನಾಡಿನದ್ದೇ ಕಥೆ. ಈಗ ತುಳುವಿನಲ್ಲೇ ಬರುತ್ತಿದೆ.