ನೆನಪಿರಲಿ ಪ್ರೇಮ್ ಅವರ ಮಗ ಗುರು ಶಿಷ್ಯರು ಚಿತ್ರದಲ್ಲಿ ಪುಟ್ಟ ಪಾತ್ರದಲ್ಲಿ ಎಂಟ್ರಿ ಕೊಟ್ಟು ಶಹಬ್ಬಾಸ್ ಎನ್ನಿಸಿಕೊಂಡ ಬೆನ್ನಲ್ಲೇ ಮಗಳು ಕೂಡಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾಗಿದೆ. ಪ್ರೇಮ್ ಪುತ್ರಿ ಅಮೃತಾ ನಾಯಕಿಯಾಗಿ ಎಂಟ್ರಿ ಕೊಡುತ್ತಿದ್ದಾರೆ. ಡಾಲಿ ಧನಂಜಯ್ ನಿರ್ಮಾಣದ ಟಗರು ಪಲ್ಯ ಚಿತ್ರಕ್ಕೆ ಅಮೃತಾ ಹೀರೋಯಿನ್. ಚಿತ್ರತಂಡಕ್ಕೊಂದು ಮಹಾಲಕ್ಷ್ಮಿ ಬೇಕಿತ್ತು. ಆ ಪಾತ್ರ ಗೆದ್ದರೆ ಇಡೀ ಸಿನಿಮಾ ಗೆದ್ದಂತೆ. ಚಿತ್ರದ ನಾಯಕಿಯ ಪಾತ್ರವೇ ಅಷ್ಟು ಚೆನ್ನಾಗಿದೆ. ಮಹಾಲಕ್ಷ್ಮಿಯಂತಿರಬೇಕು. ಅಂತಹ ಹುಡುಗಿ ಬೇಕು ಎಂದು ಹುಡುಕುತ್ತಿದ್ದಾಗ ನಮ್ ಡೈರೆಕ್ಟರ್ ಪ್ರೇಮ್ ಅವರ ಮಗಳನ್ನು ತೋರಿಸಿದು. ನಾನು ಅಮೃತಾರನ್ನು ನೋಡಿರಲಿಲ್ಲ. ಆದರೆ ಫೋಟೋ ಮತ್ತು ವಿಡಿಯೋ ನೋಡಿದಾಗ ಇಷ್ಟವಾಯಿತು ಎಂದಿದ್ದಾರೆ ಡಾಲಿ ಧನಂಜಯ್.
ಅಪ್ರೋಚ್ ಮಾಡುವ ಮುಂಚೆ ಪ್ರೇಮ್ ಅವರು ತಮ್ಮ ಮಗಳನ್ನು ಲಾಂಚ್ ಮಾಡುವುದಕ್ಕೆ ಏನು ಪ್ಲಾನ್ ಮಾಡಿಕೊಂಡಿದ್ದಾರೋ.. ಏನೋ.. ಎಂಬ ಯೋಚನೆಯಲ್ಲಿಯೇ ಪ್ರೇಮ್ ಅವರಿಗೆ ಕರೆ ಮಾಡಿದೆವು. ಅವರಿಗೆ ಕಥೆ ಇಷ್ಟವಾಯಿತು ಎನ್ನುತ್ತಾರೆ ಡಾಲಿ. ದುನಿಯಾ ವಿಜಯ್ ಅವರ ಜಾಕ್ಸನ್ ಚಿತ್ರವನ್ನು ನಿರ್ದೇಶನ ಮಾಡಿದ್ದ ಉಮೇಶ್ ಕೆ. ಕೃಪ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ನಾಯಕನಾಗಿ ನಾಗಭೂಷಣ್ ಇದ್ದಾರೆ. ಬಂಡಿಕಾಳಮ್ಮ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತವೂ ನೆರವೇರಿದೆ.
ಈ ವೇಳೆ ಮಾತನಾಡಿದ ನೆನಪಿರಲಿ ಪ್ರೇಮ್ ಪುನೀತ್ ರಾಜಕುಮಾರ್ ಅವರನ್ನು ನೆನಪಿಸಿಕೊಂಡರು. ಪುನೀತ್ ಅವರು ಎಷ್ಟೇ ಕ್ರೌಡ್ ಮಧ್ಯೆ ಇದ್ದರೂ ನನ್ನ ಮಗಳನ್ನು ಕರೆದು ಮಾತನಾಡಿಸುತ್ತಿದ್ದರು. ಅಮೃತಾ ಎಜುಕೇಷನ್ ಬಗ್ಗೆ ಎಲ್ಲ ಕೇಳುತ್ತಿದ್ದರು. ಅದು ನನ್ನ ಮಗಳಿಗೂ ಇಷ್ಟವಾಗಿತ್ತು. ಪುನೀತ್ ನಿಧನರಾದಾಗ ಕೂಡಾ ಕ್ರೌಡ್ ಇರುತ್ತೆ, ಮಗಳೇ ಬೇಡ ಎಂದಿದ್ದೆ. ದೊಡ್ಡ ಕ್ರೌಡ್ ಮಧ್ಯೆಯೂ ಪುನೀತ್ ಸರ್ ನನ್ನನ್ನು ಕರೆದು ಮಾತನಾಡಿಸ್ತಾ ಇದ್ದರು. ನಾನು ಹೋಗಲೇಬೇಕು ಎಂದಳು. ಕರೆದುಕೊಂಡು ಹೋಗಿದ್ದೆ.
ಅವಳು ನನಗಿಂತ ಹೆಚ್ಚು ಪುನೀತ್ ಸರ್ ಫ್ಯಾನ್. ಅದಾದ ಮೇಲೆ ಗಂಧದ ಗುಡಿ ಪ್ರೀಮಿಯರ್ ಶೋಗೆ ಹೋಗಿದ್ದೆವು. ಆ ಪ್ರೀಮಿಯರ್ ಶೋನಲ್ಲಿ ನನ್ನ ಮಗಳೂ ಇದ್ದಳು. ಆ ವಿಡಿಯೋ ನೋಡಿಯೇ ಡೈರೆಕ್ಟರ್ ಆಯ್ಕೆ ಮಾಡಿದ್ದಾರೆ. ಒಂದು ರೀತಿ ಇದನ್ನು ಪುನೀತ್ ಸರ್ ಆಶೀರ್ವಾದವೇ ಅಲ್ಲವೇ ಎನ್ನುತ್ತಾರೆ ಪ್ರೇಮ್. ನನ್ನ ಮಗಳಿಗೆ ಆ ಆಶೀರ್ವಾದ ಎಂದಿಗೂ ಇರಲಿ ಎನ್ನುವುದು ಪ್ರೇಮ್ ಮಾತು.