ಮಾಜಿ ಸಿಎಂ ಸಿದ್ದರಾಮಯ್ಯ. ರಾಜ್ಯ ರಾಜಕಾರಣ ನಳನಳಿಸುತ್ತಿರುವಾಗಲೇ.. ಎಲೆಕ್ಷನ್ ಹತ್ತಿರ ಬಂದಿರುವಾಗಲೇ ಸಿದ್ದರಾಮಯ್ಯ ಅವರ ಜೀವನ ಚರಿತ್ರೆಯನ್ನೇಕೆ ಸಿನಿಮಾ ಮಾಡುವ ಸುದ್ದಿ ಹೊರಬೀಳುತ್ತಿದೆ. ಮಾಜಿ ಸಚಿವ ಶಿವರಾಜ್ ತಂಗಡಗಿಯವರಿಗೆ ಇಂಥಾದ್ದೊಂದು ಆಲೋಚನೆ ಬಂದಿದ್ದೇ ತಡ ಐಡಿಯಾ ಜಾರಿಗೆ ಮುಂದಾಗಿಬಿಟ್ಟಿದ್ದಾರೆ. ಎಲೆಕ್ಷನ್ ಕೂಡಾ ಹತ್ತಿರದಲ್ಲಿರೋದ್ರಿಂದ ನೀವು ಓಕೆ ಎಂದುಬಿಡಿ. ಮಿಕ್ಕಿದ್ದನ್ನು ನಾವು ನೋಡಿಕೊಳ್ತೇವೆ ಎಂದಿದ್ದಾರೆ. ಎಷ್ಟರಮಟ್ಟಿಗೆ ರೆಡಿಯಾಗಿದ್ದಾರೆಂದರೆ ಸಿದ್ದರಾಮಯ್ಯ ಪಾತ್ರಕ್ಕೆ ತಮಿಳು ಚಿತ್ರರಂಗದ ಖ್ಯಾತ ನಟ ವಿಜಯ್ ಸೇತುಪತಿ ಅವರನ್ನೂ ಕಾಂಟ್ಯಾಕ್ಟ್ ಮಾಡಿದ್ದಾರೆ. ಯಾವುದೇ ಪಾತ್ರವಿರಲಿ, ಪಾತ್ರದೊಳಗೇ ತನ್ಮಯವಾಗುವ ಪರಕಾಯ ಪ್ರವೇಶ ಮಾಡುವ ವಿಜಯ್ ಸೇತುಪತಿಯವರೇ ಸಿದ್ದರಾಮಯ್ಯ ಪಾತ್ರ ಮಾಡಿದರೆ ಚೆನ್ನಾಗಿರುತ್ತದೆ ಎನ್ನುವುದು ಉತ್ತರ ಕರ್ನಾಟಕದ ಕಾಂಗ್ರೆಸ್ಸಿಗರ ನಂಬಿಕೆ. ಇದರ ಹಿಂದೆ ರಾಜಕೀಯ ಉದ್ದೇಶವೂ ಇರುವುದು ಸ್ಪಷ್ಟ.
ಅಂದಹಾಗೆ ಮೊದಲು ಅಪ್ರೋಚ್ ಮಾಡಿದ್ದು ಸಿದ್ದರಾಮಯ್ಯ ಅವರನ್ನೇ ಅಂತೆ. ಅಂದರೆ ಈಗಿನ ಸಿದ್ದರಾಮಯ್ಯ ಅವರ ಪಾತ್ರವನ್ನು ಸ್ವತಃ ಸಿದ್ದರಾಮಯ್ಯ ಅವರೇ ಮಾಡಲಿ ಎನ್ನುವುದು ಅವರ ಬಯಕೆಯಾಗಿತ್ತು. ಕನಕಗಿರಿ ಕ್ಷೇತ್ರವರು ನನ್ನನ್ನೇ ನಟಿಸುವಂತೆ ಕೇಳಿದರು. ನನಗೆ ನಟನೆ ಬರಲ್ಲ. ಬೇಡ ಎಂದೆ. ಬಯೋಪಿಕ್ ಮಾಡುವ ಪ್ಲಾನ್ ತಂದಿದ್ದರು. ಸುಮ್ಮನೆ ಯಾಕೆ, 20 ಕೋಟಿ ವೇಸ್ಟ್ ಮಾಡುತ್ತೀರಿ. ಬೇಡ ಎಂದಿದ್ದೇನೆ ಎಂದು ಹೇಳಿದ್ದಾರೆ ಸಿದ್ದರಾಮಯ್ಯ.
ಚಿತ್ರಕ್ಕೆ ಗಡ್ಡಧಾರಿ ಸಿದ್ದರಾಮಯ್ಯ ಎಂದು ಟೈಟಲ್ ಇಡುವ ಬಗ್ಗೆಯೂ ಚಿಂತನೆ ನಡೆದಿದೆ. ಜನವರಿಯಲ್ಲಿ ಮುಹೂರ್ತ ಮಾಡುವ ಯೋಚನೆಯೂ ಇದೆ. ಆದರೆ ಸಿದ್ದರಾಮಯ್ಯನವರೇ ಯೆಸ್ ಎಂದಿಲ್ಲ.