ನೆನಪಿರಲಿ ಪ್ರೇಮ್ ಅವರನ್ನು ನೋಡಿದರೆ ಇನ್ನೂ ವಯಸ್ಸಾಗಿಲ್ಲವೇನೋ ಅನ್ನಿಸೋದು ಸಹಜ. ಆದರೆ ಅವರಿಗೆ ದೊಡ್ಡ ಮಗಳಿದ್ದಾಳೆ ಎನ್ನುವುದು ಗುಟ್ಟೇನಲ್ಲ. ಅಮೃತಾ ಪ್ರೇಮ್. ಇನ್ನೂ ಕಾಲೇಜು ಓದುತ್ತಿರುವ ಅಮೃತಾ ಪ್ರೇಮ್ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಡಾಲಿ ಧನಂಜಯ ನಿರ್ಮಾಣದ ಟಗರು ಪಲ್ಯ ಚಿತ್ರ ಮೂಲಕ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ ಅಮೃತಾ ಪ್ರೇಮ್.
ಚಿತ್ರಕ್ಕೆ ಮುಗ್ಧತೆ ಹಾಗೂ ಹಳ್ಳಿ ಸೊಗಡಿನ ವೇಷಕ್ಕೆ ಹೊಂದಬಲ್ಲ ಹುಡುಗಿಗಾಗಿ ಹುಡುಕುತ್ತಿದ್ದೆವು. ಹೊಸಬರಾಗಿದ್ದರೆ ಚೆನ್ನಾಗಿರುತ್ತಾರೆ ಎಂದಾಗ ಅಮೃತಾ ಪ್ರೇಮ್ ನೆನಪಾಯಿತು. ಪಾತ್ರಕ್ಕೆ ಚೆನ್ನಾಗಿ ಹೊಂದಿಕೊಳ್ಳುತ್ತಾರೆ ಎಂದು ಫೈನಲ್ ಮಾಡಿದೆವು ಎನ್ನುತ್ತಾರೆ ಡಾಲಿ ಧನಂಜಯ್. ಟಗರು ಪಲ್ಯ ಚಿತ್ರಕ್ಕೆ ಡಾಲಿ ನಿರ್ಮಾಪಕರು. ಆದರೆ ಅವರು ನಟಿಸುತ್ತಿಲ್ಲ. ನಾಗಭೂಷಣ್ ಹೀರೋ. ಉಮೇಶ್ ನಿರ್ದೇಶಕ.
ಫಂಕ್ಷನ್ವೊಂದರಲ್ಲಿ ನಿರ್ದೇಶಕ ಉಮೇಶ್ ಅಮೃತಾ ಅವರನ್ನು ನೋಡಿದ್ದರಂತೆ. ಟಗರು ಪಲ್ಯ ಸ್ಕ್ರಿಪ್ಟ್ ಎಲ್ಲ ಮುಗಿದ ಮೇಲೆ ಈ ಪಾತ್ರಕ್ಕೆ ಯಾರು ಸೂಟ್ ಆಗಬಹುದು ಎಂದು ಯೋಚಿಸಿದಾಗ ಅಮೃತಾ ಪ್ರೇಮ್ ಅವರ ಮುಖ ಕಣ್ಮುಂದೆ ಬಂತು. ಮುಗ್ಧತೆ ಮತ್ತು ಹಳ್ಳಿ ಹುಡುಗಿ ಲುಕ್ಗೆ ಚೆನ್ನಾಗಿ ಹೊಂದಿಕೊಳ್ಳುತ್ತಾರೆ ಎಂದು ಪ್ರೇಮ್ ಅವರನ್ನು ಕಾಂಟ್ಯಾಕ್ಟ್ ಮಾಡಿದೆವು. ಅವರು ಓಕೆ ಎಂದರು ಎನ್ನುವುದು ಉಮೇಶ್ ಅವರ ಮಾತು.
ಸಿನಿಮಾ ಅಥವಾ ಬೇರೆ ಯಾವುದೇ ಆಗಿರಬಹುದು, ಅದನ್ನು ಮಗಳ ಆಯ್ಕೆಗೇ ಬಿಟ್ಟಿದ್ದೆ. ಮಗಳು ಸಿನಿಮಾ ಯೆಸ್ ಎಂದಳು. ಟಗರು ಪಲ್ಯ ಸ್ಕ್ರಿಪ್ಟ್ ಇಷ್ಟವಾಯಿತು. ಜೊತೆಗೆ ಡಾಲಿ ಧನಂಜಯ್ ನಿರ್ಮಾಣ ಎನ್ನುವುದು ಕೂಡಾ ಖುಷಿ ಕೊಟ್ಟಿತು. ಅದಾದ ಮೇಲೆ ಮಗಳ ಜೊತೆ ಮಾತನಾಡಿದೆ. ಎಜುಕೇಷನ್ ಮತ್ತು ಸಿನಿಮಾ ಎರಡನ್ನೂ ಬ್ಯಾಲೆನ್ಸ್ ಮಾಡುತ್ತೇನೆ ಎಂದು ಮಗಳೂ ಭರವಸೆ ಕೊಟ್ಟಳು. ನನ್ನ ಮಗಳು ಒಳ್ಳೆಯ ಕಥೆ, ಬ್ಯಾನರ್ ಮತ್ತು ಒಳ್ಳೆಯ ನಿರ್ದೇಶಕರ ಸಿನಿಮಾ ಮೂಲಕ ಲಾಂಚ್ ಆಗುತ್ತಿದ್ದಾಳೆ ಎಂಬ ಖುಷಿಯಿದೆ ಎಂದಿದ್ದಾರೆ ಪ್ರೇಮ್. ಅಮೃತಾ ಪ್ರೇಮ್ ಫೈನಲ್ ಇಯರ್ ಎಂಜಿನಿಯರಿಂಗ್ ಓದುತ್ತಿದ್ದು, ಅತ್ತ ಎಜುಕೇಷನ್ ಇನ್ನೊಂದೆಡೆ ಸಿನಿಮಾ ವರ್ಕ್ಶಾಪ್ ಎರಡರಲ್ಲೂ ಬ್ಯುಸಿಯಾಗಿದ್ದಾರೆ.