` ರೇಮೋ ನೋಡೋಕೆ ಇಲ್ಲಿವೆ ಕಾರಣ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ರೇಮೋ ನೋಡೋಕೆ ಇಲ್ಲಿವೆ ಕಾರಣ..
Raymo Movie Image

ರೇಮೋ. ಇದೇ ನವೆಂಬರ್ 25ರಂದು ರಿಲೀಸ್ ಆಗುತ್ತಿರುವ ಚಿತ್ರ. ಪವನ್ ಒಡೆಯರ್ ನಿರ್ದೇಶನದ ಸಿನಿಮಾ ಇದು. ಸಿ.ಆರ್.ಮನೋಹರ್ ನಿರ್ಮಾಣ ಮಾಡಿರುವ ಚಿತ್ರ ಅದ್ಧೂರಿಯಾಗಿ ಬರುತ್ತಿದೆ. ಚಿತ್ರ ನೋಡೋಕೆ ಹಲವು ಕಾರಣಗಳಿವೆ.

ರೇಮೋ, ಗೂಗ್ಲಿ ನಂತರ ಪವನ್ ಒಡೆಯರ್ ನಿರ್ದೇಶನ ಮಾಡಿರುವ ಲವ್ ಸ್ಟೋರಿ. ಲವ್ ಸ್ಟೋರಿಗಳನ್ನು ವಿಭಿನ್ನವಾಗಿ ಹೇಳೋದು ಪವನ್ ತಾಕತ್ತು. ಚಿತ್ರದಲ್ಲಿ ಹೀರೋ ಇಶಾನ್ ರೇವಂತ್ ಆಗಿ, ಆಶಿಕಾ ರಂಗನಾಥ್ ಮೋಹನ ಆಗಿ ನಟಿಸಿದ್ದಾರೆ.

ಚಿತ್ರದ ರಿಯಲ್ ಹೀರೋ ಅರ್ಜುನ್ ಜನ್ಯಾ. ಅವರ ಸಂಗೀತವೇ ಚಿತ್ರದ ಆತ್ಮ. ಆನ್ ಸ್ಕ್ರೀನ್ ಹೀರೋ ಇಶಾನ್ ಅದರೆ, ಆಫ್ ಸ್ಕ್ರೀನ್ ಹೀರೋ ಅರ್ಜುನ್ ಜನ್ಯ. ರೇಮೋ ಅದ್ಭುತವಾದ ಮ್ಯೂಸಿಕಲ್ ಜರ್ನಿ ಎನ್ನುತ್ತಾರೆ ಪವನ್ ಒಡೆಯರ್.

2022ರಲ್ಲಿ ಪವನ್ ಒಡೆಯರ್‍ಗೆ ಲಕ್ಕಿ ವರ್ಷ. ಈ ವರ್ಷವೇ ಡೊಳ್ಳು ಚಿತ್ರಕ್ಕೆ ರಾಷ್ಟ್ರಪ್ರಶಸ್ತಿಯನ್ನೂ ಪಡೆದಿರುವ ಪವನ್, ಹಿಂದಿಗೂ ಕಾಲಿಟ್ಟಿದ್ದಾರೆ. ಜೊತೆಗೆ ರೇಮೋ ರಿಲೀಸ್. ಈ ಚಿತ್ರವನ್ನು ಮಾಡಿರುವುದೇ ಯುವ ಜನತೆಗಾಗಿ. ಈಗಿನ ಯೂಥ್ಸ್ ಪ್ರೀತಿಗೆ ಎಷ್ಟು ಬೇಗ, ವೇಗವಾಗಿ ಬೀಳುತ್ತಾರೋ.. ಅಷ್ಟೇ ವೇಗವಾಗಿ ಪ್ರೀತಿಯಿಂದ ಎಕ್ಸಿಟ್ ಆಗುತ್ತಾರೆ. ಚಿತ್ರದ ರೇಮೋ ಮತ್ತು ಮೋಹನಳ ಪಾತ್ರದ ಜೊತೆಗೆ ಪ್ರತಿಯೊಬ್ಬರೂ ಕನೆಕ್ಟ್ ಆಗುತ್ತಾರೆ. ತಂದೆ ತಾಯಂದಿರ ಪ್ರೀತಿ-ತ್ಯಾಗ ಅರ್ಥವಾಗುವುದು ಅವರಿಗೆ ಅನುಭವವಾದಾಗಲೇ.. ಎನ್ನುತ್ತಾರೆ ಪವನ್ ಒಡೆಯರ್.

ರೇವಂತ್ ಸ್ವಪ್ರತಿಷ್ಠೆ, ಅಹಂಕಾರ ಇರುವ ಹುಡುಗನಾದರೆ, ಮೋಹನ ಭಾವನಾಜೀವಿ. ಸಾಂಪ್ರದಾಯಿಕ ಹುಡುಗಿ. ಅವರಿಬ್ಬರೂ ಪರಸ್ಪರ ಪ್ರೀತಿಗೆ ಬೀಳುತ್ತಾರೆ. ಬದಲಾಗುತ್ತಾರೆ. ದ್ವೇಷಿಸುತ್ತಾರೆ. ಒಂದಾಗುತ್ತಾರೆ. ಇವೆಲ್ಲದರ ಮಧ್ಯೆ ಸಂಗೀತವೇ ಆಯುಧವಾಗಿ ನಿಲ್ಲುತ್ತೆ. ಇಂತಹ ಕಥೆಗಳು ಅಪರೂಪವಾಗಿದ್ದ ಹೊತ್ತಿನಲ್ಲಿ ರೇಮೋ ಈ ವಾರ ಬರುತ್ತಿದೆ