ಅಭಿಷೇಕ್ ಅಂಬರೀಷ್-ರಚಿತಾ ರಾಮ್ ಪ್ರಮುಖ ಪಾತ್ರದಲ್ಲಿರೋ ದುನಿಯಾ ಸೂರಿ ನಿರ್ದೇಶನದ ಬ್ಯಾಡ್ ಮ್ಯಾನರ್ಸ್ ಕನಕಪುರ ಸುತ್ತಮುತ್ತ ಬೀಡುಬಿಟ್ಟಿದೆ. ಇಲ್ಲಿನ ಕಲ್ಲು ಕ್ವಾರಿಗಳಲ್ಲಿ ಧೂಳು, ಹಳೇ ಕಾರು, ಟೀ ಅಂಗಡಿ, ಉರಿಯುತ್ತಿರುವ ಟೈರ್ಗಳ ಮಧ್ಯೆ ಶೂಟಿಂಗ್ ನಡೆಯುತ್ತಿದೆ. ಬ್ಯಾಡ್ ಮ್ಯಾನರ್ಸ್ ಚಿತ್ರಕ್ಕಾಗಿ ಈಗಾಗಲೇ 100ಕ್ಕೂ ಹೆಚ್ಚಿನ ದಿನಗಳ ಚಿತ್ರೀಕರಣ ಮಾಡಿರುವ ಸೂರಿ, ಕೊನೆಯ ಹಂತದ ಚಿತ್ರೀಕರಣಕ್ಕೆ ಕನಕಪುರಕ್ಕೆ ಶಿಫ್ಟ್ ಆಗಿದ್ದಾರೆ. ಬರೀ ಫೈಟ್ ಅಲ್ಲ, ಚಿತ್ರದ ಹಾಡಿಗೆ ಮಾಂಟೇಜ್ ಸೀನ್ಗಳ ಚಿತ್ರೀಕರಣವೂ ನಡೆಯುತ್ತಿದೆ.
ಕನಕಪುರದ ಕಲ್ಲು ಕ್ವಾರಿಯಲ್ಲಿ ಸಣ್ಣ ಸೆಟ್ ಹಾಕಿಸಿದ್ದೇವೆ. ಇದಾದ ಮೇಲೆ ಬೆಂಗಳೂರಿನಲ್ಲಿ ಒಂದಿಷ್ಟು ಪ್ಯಾಚ್ವರ್ಕ್ ಇದೆ. ನಂತರ ನಾಯಕನ ಇಂಟ್ರೋ ಸಾಂಗ್ ಶೂಟಿಂಗ್ ನಡೆಯಲಿದೆ. ಅಭಿಷೇಕ್ ಮತ್ತು ಅಂಬರೀಶ್ ಫ್ಯಾನ್ಸ್ ಥ್ರಿಲ್ ಆಗುವಂತಹ ಹಲವು ಅಂಶಗಳಿವೆ. ಸಣ್ಣ ವಿಷಯದ ಮೂಲಕ ದೊಡ್ಡ ಕಥೆಯನ್ನು ಹೇಳುತ್ತಿದ್ದೇವೆ ಎನ್ನುತ್ತಾರೆ ಸೂರಿ.
ನಿರ್ದೇಶಕರು ಕೇಳಿದ್ದನ್ನು ಕೊಡುವುದು ನನ್ನ ಕೆಲಸ. ನಾನೂ ಒಬ್ಬ ಫ್ಯಾನ್ ಆಗಿ ಸಿನಿಮಾಗಾಗಿ ಕಾಯುತ್ತಿದ್ದೇನೆ ಎನ್ನುವುದು ನಿರ್ಮಾಪಕ ಸುಧೀರ್ ಕೆ ಎಂ ಮಾತು.
ನಿರ್ದೇಶಕರು ಹೇಳಿದಂತೆ ಮಾಡುತ್ತಿದ್ದೇನೆ. ಒಂದೊಂದು ಶಾಟ್ ಕೂಡಾ ಚೆನ್ನಾಗಿಯೇ ಬರಬೇಕು ಎಂದು ಅನ್ನೋ ಉದ್ದೇಶ ಸೂರಿಯವರದ್ದು. ಅವರು ಹೇಳಿದ್ದನ್ನು ಮಾಡುವುದು ನನ್ನ ಕೆಲಸ ಎಂದು ಎಲ್ಲ ಭಾರವನ್ನೂ ನಿರ್ದೇಶಕರ ಹೆಗಲಿಗೇ ವರ್ಗಾಯಿಸಿದ್ದಾರೆ ಅಭಿಷೇಕ್ ಅಂಬರೀಷ್.