ಲವ್ ಮಾಕ್ಟೇಲ್ ಚಿತ್ರದಲ್ಲಿ ಪಟ್ ಪಟಾಕಿಯಂತೆ ಮಾತನಾಡುತ್ತಾ ಹೆಂಗೆ ನಾವು.. ಎಂಬ ಡೈಲಾಗ್ನಿಂದ ಕರ್ನಾಟಕ ಕ್ರಷ್ ಆದವರು ರಚನಾ ಇಂದರ್. ಬೆನ್ನಲ್ಲೇ ರಿಷಬ್ ಶೆಟ್ಟಿ ಎದುರು ಹರಿಕಥೆ ಅಲ್ಲ ಗಿರಿಕಥೆಯಲ್ಲಿ ಪಟ್ ಪಟಾ ಪಟ್ ಪಟಾ.. ಅಂತಾ ಬುಡುಬುಡುಕೆ ಡೈಲಾಗ್ ಹೊಡೆದು ನಿಬ್ಬೆರಗಾಗಿಸಿದ್ದ ರಚನಾ, ಲವ್ 360ಯಲ್ಲಿ ಶಶಾಂಕ್ರಂತಾ ನಿರ್ದೇಶಕರ ಜೊತೆ ಕಣ್ಣುಗಳಲ್ಲೇ ನಟಿಸಿ ಗೆದ್ದವರು. ಈಗ ತ್ರಿಬಲ್ ರೈಡಿಂಗ್ನಲ್ಲಿ ಧೈರ್ಯವಂತ ಹುಡುಗಿಯ ಪಾತ್ರ ಮಾಡಿದ್ದಾರೆ. ಅದೂ ಗೋಲ್ಡನ್ ಸ್ಟಾರ್ ಗಣೇಶ್ ಎದುರು. ಅದಿತಿ ಪ್ರಭುದೇವ ಮತ್ತು ಮೇಘಾ ಶೆಟ್ಟಿ ಜೊತೆ ಹೀರೋಯಿನ್ ಆಗಿದ್ದಾರೆ.
ಅಂದಹಾಗೆ ಸಿನಿಮಾದ ನಡುವೆಯೂ ತಮ್ಮ ಎಂಬಿಎ ಅಸೈನ್ಮೆಂಟ್ಗಳಲ್ಲಿ ರಚನಾ ಬ್ಯುಸಿ. ಏಕೆಂದರೆ ನಾನು ಸಿನಿಮಾಗೆ ಬರುತ್ತೇನೆ ಎಂದಾಗ ಅಪ್ಪ ಅಮ್ಮ ಎಜುಕೇಷನ್ ಬಿಡಬಾರದು ಎಂದು ಕಂಡೀಷನ್ ಹಾಕಿದ್ದರು. ನನಗೂ ಸಿನಿಮಾ ಗೊತ್ತಿಲ್ಲ. ಮನೆಯವರಿಗೂ ಚಿತ್ರರಂಗ ಅಪರಿಚಿತ. ಹೀಗಾಗಿ ಅವರು ನನ್ನ ವಿದ್ಯಾಭ್ಯಾಸವನ್ನು ಬಿಟ್ಟುಕೊಡಲು ರೆಡಿಯಿರಲಿಲ್ಲಲ. ನಾನು ಸಿನಿಮಾ ಮತ್ತು ಎಜುಕೇಷನ್ ಎರಡನ್ನೂ ನಿಭಾಯಿಸುತ್ತಿದ್ದೇನೆ ಎನ್ನುತ್ತಾರೆ ರಚನಾ ಇಂದರ್.
ನನಗೆ ನಿರೀಕ್ಷೆಗಳಿರಲಿಲ್ಲ. ನನ್ನ ವೃತ್ತಿಜೀವನವನ್ನು ಪ್ರಾರಂಭದಲ್ಲಿ ನನಗೆ ಕೃಷ್ಣ ಮತ್ತು ರಿಷಬ್ ಶೆಟ್ಟಿ ಅವರಂತಹ ನಟರ ಜೊತೆಯಲ್ಲಿ ಅಭಿನಯಿಸಲು ಅವಕಾಶ ಸಿಕ್ಕಿತು. ಶಶಾಂಕ್ ಅವರಂತಹ ಹೆಸರಾಂತ ನಿರ್ದೇಶಕರ ಜೊತೆಗೆ ಸೋಲೋ ಹೀರೋಯಿನ್ ಆಗಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ಇದೀಗ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿದ್ದೇನೆ ಎನ್ನುತ್ತಾರೆ ರಚನಾ.
ತ್ರಿಬಲ್ ರೈಡಿಂಗ್ ಚಿತ್ರೀಕರಣ ಶುರುವಾಗಿದ್ದು ಲವ್ ಮಾಕ್ಟೇಲ್ ನಂತರ. ಯಾವುದೇ ಅಭ್ಯಾಸವಿರಲಿಲ್ಲ.
ಸ್ಥಳದಲ್ಲೇ ಡೈಲಾಗ್ ಕೊಡುತ್ತಿದ್ದರು. ಆಗ ಭಯವಾಗಿತ್ತು. ಗಣೇಶ್ ಮತ್ತು ರಂಗಾಯಣ ರಘು ಎದುರು ನಟಿಸುತ್ತಿದ್ದ ಕಾರಣ ಭಯ ಸ್ವಲ್ಪ ಹೆಚ್ಚೇ ಇತ್ತು. ನನಗಿನ್ನು ಸ್ಟೇಜ್ ಫಿಯರ್ ಇದೆ. ಸುತ್ತ ಜನರಿದ್ದಾಗ ನಾನು ಕಾನ್ಶಿಯಸ್ ಆಗುತ್ತೇನೆ. ಆದರೆ, ದಿನಕಳೆದಂತೆ ಕಂಫರ್ಟ್ ಆದೆ ಎಂದಿರುವ ರಚನಾಗೆ ತ್ರಿಬ್ಬಲ್ ರೈಡಿಂಗ್ ಮೂಲಕ ಮತ್ತೊಮ್ಮೆ ಗೆಲ್ಲುತ್ತೇನೆ ಎಂಬ ಭರವಸೆಯಲ್ಲಿದ್ದಾರೆ.