ಕನ್ನಡ ಚಿತ್ರರಂಗದಲ್ಲೇ ಹೊಸ ಹೊಸ ದಾಖಲೆಗಳನ್ನು ಬರೆಯುತ್ತಲೇ ಇರುವ ಕಾಂತಾರ ಹಲವು ದಾಖಲೆಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದೆ. ಕಾಂತಾರ ಈಗ ಕನ್ನಡದಲ್ಲೇ ಅತೀ ಹೆಚ್ಚು ಬಾಕ್ಸಾಫೀಸ್ ಗಳಿಕೆ ಮಾಡಿದ ಚಿತ್ರ ಹಾಗೂ ಥಿಯೇಟರಿನಲ್ಲಿ ಅತೀ ಹೆಚ್ಚು ಜನ ನೋಡಿದ ಚಿತ್ರವೂ ಹೌದು. ಈಗ 50ನೇ ದಿನದತ್ತ ಕಾಲಿಟ್ಟಿದೆ. ಈ ಶನಿವಾರಕ್ಕೆ 50ನೇ ದಿನದ ಗುರಿ ಮುಟ್ಟಲಿದೆ ಕಾಂತಾರ.
ಇದು ವಿಶೇಷವೂ ಹೌದು. ಏಕೆಂದರೆ ಬಿಡುಗಡೆಯಾದ ಎಲ್ಲ ಕೇಂದ್ರಗಳಲ್ಲೂ ಅರ್ಧಶತಕ ಪೂರೈಸುತ್ತಿರುವುದು ವಿಶೇಷ ದಾಖಲೆ. 300ಕ್ಕೂ ಹೆಚ್ಚು ಸೆಂಟರ್‍ಗಳಲ್ಲಿ ಕಾಂತಾರ 50 ದಿನ ಪೂರೈಸುತ್ತಿದೆ. ಬೆಂಗಳೂರಿನಲ್ಲೇ ಮಲ್ಟಿಪ್ಲೆಕ್ಸ್ ಬಿಟ್ಟು 30ಕ್ಕೂ ಸೆಂಟರ್‍ಗಳಲ್ಲಿ ಕಾಂತಾರ 50 ದಿನ ಪೂರೈಸುತ್ತಿರುವುದು ವಿಶೇಷ.
ಆದರೆ ಮೇನ್ ಥಿಯೇಟರ್ ನರ್ತಕಿಯಲ್ಲಿ ಮಾತ್ರ ಹಾಗಾಗುತ್ತಿಲ್ಲ. ನರ್ತಕಿ ಕಾಂತಾರ ಚಿತ್ರದ ಮೇನ್ ಥಿಯೇಟರ್. ಆದರೆ ನರ್ತಕಿಯಲ್ಲಿ 48ನೇ ದಿನಕ್ಕೆ ಕಾಂತಾರ ನಿರ್ಗಮಿಸಲಿದೆ. ಕಾಂತಾರ ಬಿಡುಗಡೆಯಾದ 49ನೇ ದಿನ ನರ್ತಕಿಯಲ್ಲಿ ಪ್ರಜ್ವಲ್ ದೇವರಾಜ್ ಅಭಿನಯದ ಅಬ್ಬರ ರಿಲೀಸ್ ಆಗಲಿದೆ. ಹೀಗಾಗಿ ಮೇನ್ ಥಿಯೇಟರಿನಲ್ಲಿಯೇ ದಾಖಲೆ ಬರೆಯಲಾಗುತ್ತಿಲ್ಲ ಕಾಂತಾರ.
ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿದ್ದ ಕಾಂತಾರ ಈಗಲೂ ಉತ್ತಮ ಪ್ರದರ್ಶನ ಕಾಣುತ್ತಿದೆ. ಥಿಯೇಟರಿನಲ್ಲಿ ಈಗಲೂ ಜನ ಬರುತ್ತಿದ್ದಾರೆ. ಕೆಜಿಎಫ್ ಮೂಲಕ ಸುನಾಮಿ ಹಿಟ್ ಕಂಡಿದ್ದ ಹೊಂಬಾಳೆ, ಕಾಂತಾರ ಮೂಲಕ ಡಿವೈನ್ ಹಿಟ್ ಸಾಧಿಸಿದೆ.