2021ರಲ್ಲಿ ಬಿಡುಗಡೆಯಾದ ಕೊನೆಯ ಸಿನಿಮಾ ಬಡವ ರಾಸ್ಕಲ್. ಡಾಲಿ ಧನಂಜಯ ಮತ್ತು ಅಮೃತಾ ಅಯ್ಯಂಗಾರ್ ಪ್ರಧಾನ ಪಾತ್ರದಲ್ಲಿದ್ದ ಸಿನಿಮಾದೊಂದಿಗೆ 2021 ಮುಗಿದಿತ್ತು. ಜೊತೆಯಲ್ಲೇ ಡಾಲಿಯ ಅದೃಷ್ಟದ ಬಾಗಿಲೂ ತೆರೆದಿತ್ತು. ನಿರ್ಮಾಪಕರಾಗಿಯೂ ಗೆದ್ದಿದ್ದರು ಡಾಲಿ ಧನಂಜಯ. ಈಗ 2022ರ ಕೊನೆ ಹತ್ತಿರವಾಗುತ್ತಿದೆ. ಈ ಬಾರಿಯೂ ಕೊನೆಯ ಸಿನಿಮಾ ಡಾಲಿ ಧನಂಜಯ್ ಅವರದ್ದೇ. ಡಿ.30ರಂದು ಇದೇ ಮೊದಲ ಬಾರಿಗೆ ಡಾಲಿ ಮತ್ತು ಆದಿತಿ ಪ್ರಭುದೇವ ಜೊತೆಯಾಗಿ ನಟಿಸಿರೋ ಒನ್ಸ್ ಅಪಾನ್ ಎ ಟೈಂ ಇನ್ ಜಮಾಲಿಗುಡ್ಡ ಸಿನಿಮಾ ರಿಲೀಸ್ ಆಗಲಿದೆ. ಕನ್ನಡ ಮತ್ತು ತೆಲುಗು ಎರಡೂ ಭಾಷೆಯಲ್ಲಿ ರಿಲೀಸ್ ಆಗಲಿದೆ.
ಕನ್ನಡಕ್ಕಾಗಿ ಒಂದನ್ನು ಒತ್ತಿ ಖ್ಯಾತಿಯ ಕುಶಾಲ್ ಗೌಡ ಆಕ್ಷನ್ ಕಟ್ ಹೇಳಿದ್ದು ನಿಹಾರಿಕ ಮೂವಿಶ್ ಲಾಂಛನದಡಿ ಶ್ರೀ ಹರಿ ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ ಸಂಯೋಜಿಸಿದ್ದು ಹಿನ್ನೆಲೆ ಸಂಗೀತವನ್ನ ಅನೂಪ್ ಸೀಳಿನ್ ಸಂಯೋಜಿಸಿದ್ದಾರೆ.
ಡಾಲಿ, ಆದಿತಿ ಜೊತೆಗೆ ಚಿತ್ರದಲ್ಲಿ ಭಾವನಾ ರಾಮಯ್ಯ, ಬಾಲನಟಿ ಪ್ರಾಣ್ಯ ರಾವ್, ಯಶ್ ಶೆಟ್ಟಿ ಕೂಡಾ ನಟಿಸಿದ್ದಾರೆ. ಹಿರೋಶಿಮಾ, ನಾಗಸಾಕಿ, ಕಾರು, ಮತ್ತೇ ಅವ್ಳು ..! ಪ್ರತಿ ಪಾತ್ರಗಳ ಹಿಂದೆ ಕಥೆಯಿದೆ, ಆ ಕಥೆಗಳ ಒಳಗೆ ಹಲವು ಕುತೂಹಲ ಘಟನೆಗಳು. ಒಂದೊಂದರ ಹಿಂದೆಯೂ ಒಂದೊಂದು ಕಥೆಯಿದೆ ಅನ್ನೋ ಸುಳಿವು ಕೊಟ್ಟಿದ್ದಾರೆ ಡಾಲಿ ಧನಂಜಯ್.