ಕಾಂತಾರದ ವಿಶ್ವರೂಪವನ್ನು ಜಗತ್ತಿಗೇ ಪರಿಚಯಿಸಿದ್ದು ಕಾಂತಾರದ ವರಾಹರೂಪಂ. ಆದರೆ ಸಿನಿಮಾ ಬಿಡುಗಡೆಯಾಗದ ಕೆಲವೇ ದಿನಗಳಲ್ಲಿ ವರಾಹರೂಪಂ ಹಾಡು ವೊರಿಜಿನಲ್ ಅಲ್ಲ, ಕಾಪಿ ಮಾಡಿದ್ದು ಎಂಬ ಆರೋಪ ಕೇಳಿ ಬಂದಿತ್ತು. ಕೇರಳದ ತೈಕ್ಕುಡಂ ಬ್ರಿಡ್ಜ್ ತಂಡದವರು ಹಾಡಿನ ವಿರುದ್ಧ ಕಾಪಿ ರೈಟ್ ಉಲ್ಲಂಘನೆ ಕೇಸು ಹಾಕಿದ್ದರು. ತೈಕ್ಕುಡಂ ತಂಡದ ನವರಸಂ ಮ್ಯೂಸಿಕ್ ಆಲ್ಬಂನ ಯಥಾವತ್ ಕಾಪಿ ಈ ಹಾಡು ಎಂದು ದೂರಿದ್ದರು.
ವರಾಹರೂಪಂ ಹಾಡು ನಮ್ಮದು. ನವರಸಂ ಮ್ಯೂಸಿಕ್‍ನ್ನು ಯಥಾವತ್ ಕಾಪಿ ಮಾಡಿ ವರಾಹರೂಪಂ ಹಾಡು ಸೃಷ್ಟಿಸಲಾಗಿದೆ. ನಮಗಿನ್ನೇನೂ ಬೇಡ, ಕ್ರೆಡಿಟ್ ಕೊಡಿ ಎಂದು ಕೇಳಿತ್ತು. ನಿರ್ದೇಶಕ ರಿಷಬ್ ಶೆಟ್ಟಿ ಕೂಡಾ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಪರವಾಗಿಯೇ ನಿಂತಿದ್ದು ಕೋರ್ಟಿನಲ್ಲಿ ಗೆಲ್ಲುವುದಕ್ಕೆ ಹೋರಾಡುತ್ತಿದ್ದಾರೆ. ಇದರ ಮಧ್ಯೆಯೇ ಹಾಡು ಡಿಲೀಟ್ ಆಗಿದೆ.
ಕೇರಳದ ಕೊಯಿಕ್ಕೋಡ್ ನ್ಯಾಯಾಲಯ ಹಾಡಿಗೆ ಸ್ಟೇ ಕೊಟ್ಟಿತ್ತು. ಈಗ ಆ ಹಾಡನ್ನು ಹೊಂಬಾಳೆ ಯೂಟ್ಯೂಬ್ ಚಾನೆಲ್ಲಿಂದ ಡಿಲೀಟ್ ಮಾಡಲಾಗಿದೆ.
ಕೋರ್ಟ್ ಅದೇಶ ನೀಡಿದ 2 ವಾರಗಳ ನಂತರ ಹಾಡನ್ನು ಡಿಲೀಟ್ ಮಾಡಲಾಗಿದೆ. ಈಗಲೂ ಈ ಕ್ಷಣಕ್ಕೂ ಹೊಂಬಾಳೆ ತಂಡ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಹಾಡು ತಮ್ಮ ವೊರಿಜಿನಲ್ ಸೃಷ್ಟಿಯೇ ಹೊರತು ಕದ್ದಿದ್ದಲ್ಲ ಎಂದು ವಾದಿಸುತ್ತಿದ್ದಾರೆ. ಇದುವರೆಗೆ ಈ ಹಾಡನ್ನು ಮೂರೂವರೆ ಕೋಟಿಗೂ ಹೆಚ್ಚು ಜನ ವೀಕ್ಷಿಸಿದ್ದರು.