ಕಾಂತಾರ ಚಿತ್ರ ಮತ್ತೊಂದು ದಾಖಲೆ ಬರೆದಿದೆ. ರಿಷಬ್ ಶೆಟ್ಟಿ ಅಭಿನಯ ಮತ್ತು ನಿರ್ದೇಶನದ ಕಾಂತಾರ ನಿರೀಕ್ಷೆಗೂ ಮೀರಿ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದೆ. 6ನೇ ವಾರದಲ್ಲಿ ಮುನ್ನುಗ್ಗುತ್ತಿರುವ ಚಿತ್ರದ ಕ್ರೇಜ್ ಇನ್ನೂ ಕಡಿಮೆಯಾಗಿಲ್ಲ. ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿರುವ ಕಾಂತಾರದ್ದು ದೈವೀಕ ಹಿಟ್. ಈಗ ಈ ಚಿತ್ರ ಕರ್ನಾಟಕದಲ್ಲಿ ಒಂದು ವಿಶೇಷ ದಾಖಲೆ ಬರೆದಿದೆ.
ಕರ್ನಾಟಕದಲ್ಲಿ ಕಾಂತಾರ ನೋಡಿದವರ ಸಂಖ್ಯೆ 1 ಕೋಟಿ ದಾಟಿದೆ. ಇದು ಇದುವರೆಗೆ ಕಂಡು ಕೇಳಿಲ್ಲದ ದಾಖಲೆ. ಸೆಪ್ಟೆಂಬರ್ 30ರಂದು ರಿಲೀಸ್ ಆಗಿದ್ದ ಕಾಂತಾರ 25 ದಿನದಲ್ಲಿ ಕೆಜಿಎಫ್ 2 ದಾಖಲೆ ಬ್ರೇಕ್ ಮಾಡಿತ್ತು. 77 ಲಕ್ಷ ಟಿಕೆಟ್ ಸೇಲ್ ಆಗಿತ್ತು. ಅದು ಒಂದು ದಾಖಲೆ. ತನ್ನದೇ ದಾಖಲೆಯನ್ನು ಮುರಿಯುತ್ತಾ ಮುನ್ನುಗ್ಗುತ್ತಿರುವ ಕಾಂತಾರ ಚಿತ್ರದ ಟಿಕೆಟ್ ಸೇಲ್ ಆಗಿರುವ ಸಂಖ್ಯೆ 1 ಕೋಟಿ ದಾಟಿದೆ. ಇದು ಕೇವಲ ಕರ್ನಾಟಕದ ಲೆಕ್ಕ.
ಕಾಂತಾರದ ಪ್ರಮುಖ ಚಿತ್ರಮಂದಿರ ವೀರೇಶ್ ಸಿನಿಮಾಸ್‍ನಲ್ಲಿಯೇ 1.30 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೇಲ್ ಆಗಿವೆಯೆಂದರೆ ಅದು ಕಾಂತಾರ ಪವಾಡ. ತೆಲುಗು ಹಾಗೂ ಹಿಂದಿಯಲ್ಲಿ ದಾಖಲೆಯ ಕಲೆಕ್ಷನ್ ಮಾಡಿದೆ. ತೆಲುಗಿನಲ್ಲಿ 50 ಕೋಟಿಗೂ ಹೆಚ್ಚು ಬಿಸಿನೆಸ್ ಮಾಡಿರುವ ಕಾಂತಾರ ಹಿಂದಿಯಲ್ಲಿ ಆಗಲೇ 70 ಕೋಟಿ ಹತ್ತಿರದಲ್ಲಿದೆ. ಅಧಿಕೃತ ಅಥವಾ ಸೋರ್ಸ್ ಲೆಕ್ಕವೂ ಸಿಗದೇ ಇರುವುದು ತಮಿಳು ಹಾಗೂ ಮಲಯಾಳಂನಲ್ಲಿ ಮಾತ್ರ. ಅಮೆರಿಕದಲ್ಲಿ 2 ಮಿಲಿಯನ್ ಡಾಲರ್ ಕಲೆಕ್ಷನ್ ಮಾಢಿದ ಮೊದಲ ಕನ್ನಡ ಸಿನಿಮಾ. ಹಾಗೆ ನೋಡಿದರೆ ಅತೀ ಹೆಚ್ಚು ಜನ ಚಿತ್ರಮಂದಿರಕ್ಕೆ ಬರುವಂತೆ ಮಾಡಿದ ಕಾಂತಾರದ್ದು ನಿಜವಾದ ಯಶಸ್ಸು.