ಮನುಷ್ಯನ ವಿಲಕ್ಷಣ ಮನಸ್ಸಿನ ಹೋರಾಟ, ಸರಿ ತಪ್ಪುಗಳ ಸಿದ್ದಾಂತ, ಅಹಂಕಾರಗಳ ಗುದ್ದಾಟ.. ನಿರ್ದೇಶಕ ರೋಹಿತ್ ಪದಕಿ ಅವರ ಪ್ರಕಾರ ಉತ್ತರಕಾಂಡ ಚಿತ್ರದ ಕಥೆಯ ಎಳೆ ಇದು. ಈ ಚಿತ್ರದ ಮೂಲಕವೇ ರಮ್ಯಾ ಮತ್ತೊಮ್ಮೆ ತೆರೆ ಮೇಲೆ ನಟಿಸುತ್ತಿದ್ದಾರೆ. ಈ ಸಿನಿಮಾನೇ ಒಂದು ಸೆಲಬ್ರೇಷನ್. ಉತ್ತರಕರ್ನಾಟಕದ ಅಧ್ಬುತ ಬದುಕಿನ ನಡುವೆ ನಡೆಯುವ ಕಥೆ ಹೇಳುತ್ತಿರುವುದು ನನಗೆ ದೊಡ್ಡ ಸವಾಲು ಮತ್ತು ಜವಾಬ್ದಾರಿ ಎಂದಿದ್ದಾರೆ ರೋಹಿತ್ ಪದಕಿ. ಇನ್ ಮ್ಯಾಲಿಂದ ಫುಲ್ ಗುದ್ದಾಂಗುದ್ದಿ ಅನ್ನೋ ಟ್ಯಾಗ್‍ಲೈನ್ ಇರೋ ಚಿತ್ರದಲ್ಲಿ ಡಾಲಿ ಧನಂಜಯ್ ಮತ್ತು ರಮ್ಯಾ ಇದೇ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ.
ಅಂದಹಾಗೆ ರತ್ನನ್ ಪ್ರಪಂಚ ಚಿತ್ರಕ್ಕೇ ರಮ್ಯಾಗೆ ಆಫರ್ ಬಂದಿತ್ತಂತೆ. ಆಗ ಕಾರಣಾಂತರಗಳಿಂದ ಮಾಡೋಕೆ ಆಗಿರಲಿಲ್ಲ. ಈ ಬಾರಿ ಮಿಸ್ ಮಾಡಲಿಲ್ಲ. ಚಿತ್ರತಂಡದವರು ತೋರುತ್ತಿರುವ ಪ್ರೀತಿ, ಬಾಂಧವ್ಯ ನೋಡುತ್ತಿದ್ದರೆ ನಾನು ಒಳ್ಳೆಯ ಜಾಗದಲ್ಲಿದ್ದೇನೆ ಅನ್ನೋ ಫೀಲಿಂಗ್ ಇದೆ ಎಂದಿದ್ದಾರೆ ರಮ್ಯಾ.
ಒಂದೇ ದಿಕ್ಕಿನಲ್ಲಿ ಆಲೋಚಿಸುವವರು ಒಟ್ಟಿಗೆ ಸೇರಿ, ನಿಸ್ವಾರ್ಥವಾಗಿ ಸಿನಿಮಾಕ್ಕಾಗಿ, ಒಬ್ಬರು ಇನ್ನೊಬ್ಬರಿಗಾಗಿ ಕೊಡುಗೆ ನೀಡಿದಾಗ ಅದ್ಭುತಗಳು ಸಂಭವಿಸುತ್ತವೆ. ಇದು ನನ್ನ ನಂಬಿಕೆ. ಅದೇ ರೀತಿ ಆಗಿದ್ದು, ಮೈಲಿಗಲ್ಲಾಗಿದ್ದು 'ರತ್ನನ್ ಪ್ರಪಂಚ'. ರೋಹಿತ್ ಪದಕಿಯಂತ ನಿರ್ದೇಶಕ ಘಟನ ಜೊತೆ ಪ್ರಯತ್ನ, ಕಾರ್ತಿಕ್ ಹಾಗು ಯೋಗಿ ಯಂತ ನಿರ್ಮಾಪಕ ಘಟರ ಜೊತೆ ಸತತವಾಗಿ ಮೂರನೆ ಪ್ರಯತ್ನ, ಇನ್ನೊಂದು ಮೈಲಿಗಲ್ಲಿನ ಕಡೆ ಮತ್ತೊಂದು ದಿಟ್ಟ ಹೆಜ್ಜೆ 'ಉತ್ತರಕಾಂಡ. ರಮ್ಯಾ ಅವರ ಜೊತೆ ನಟಿಸುತ್ತಿರುವುದು ಖುಷಿ ಕೊಟ್ಟಿದೆ'" ಎಂದಿದ್ದಾರೆ ಧನಂಜಯ. ನನ್ನ ಮೇಲೆ ನಂಬಿಕೆಯಿಟ್ಟು ನನ್ನ ಶಕ್ತಿಯಾಗಿ ನಿಂತಿರುವ ಕನ್ನಡ ಕುಲಕೋಟಿಗೆ ನನ್ನ ಹೃದಯಪೂರ್ವಕ ನಮನಗಳು. ಹೀಗೆ ಜೊತೆಗಿರಿ, ತಪ್ಪಾದಾಗ ತಿದ್ದಿ, ಗೆಲುವಾಗುವಂತೆ ಹರಸಿ, ಮೆರೆಸಿ ಎಂದು ಮನವಿ ಮಾಡಿದ್ದಾರೆ ಧನಂಜಯ. ಚಿತ್ರದ ಶೂಟಿಂಗ್ ಶೀಘ್ರದಲ್ಲೇ ಆರಂಭವಾಗಲಿದ್ದು ಇನ್ನಷ್ಟು ತಾರೆಯರು ಚಿತ್ರತಂಡ ಸೇರಿಕೊಳ್ಳಲಿದ್ದಾರೆ. ಸ್ಕ್ರಿಪ್ಟ್ ಪೂಜೆಯಷ್ಟೇ ಈಗ ನೆರವೇರಿದೆ. ಕಾರ್ತಿಕ್ ಗೌಡ, ಯೋಗಿ ಬಿ.ರಾಜ್ ಮತ್ತು ಡಾಲಿ ಮತ್ತೊಮ್ಮೆ ಜೊತೆಗೂಡಿದ್ದು ಚಿತ್ರತಂಡ ಚಿತ್ರೀಕರಣವನ್ನೇ ದೊಡ್ಡ ಮಟ್ಟದಲ್ಲಿ ಸೆಲಬ್ರೇಟ್ ಮಾಡುತ್ತಿದೆ.