ಅವಳು ಮೋಹನ. ಹೊಸ ಮ್ಯೂಸಿಕಲ್ ಸೆನ್ಸೇಷನ್. ಪ್ರೀತಿಸಿದವನ ಮೇಲೆ ಸೇಡು ತೀರಿಸಿಕೊಳ್ಳುವುದಕ್ಕಾಗಿಯೇ ಸ್ಟಾರ್ ಸಿಂಗರ್ ಆಗುತ್ತಾಳೆ. ಅವನು ರೇವಂತ್. ಫೈಟು-ದುಶ್ಚಟಗಳ ಮಧ್ಯೆಯೇ ಮೋಹನಳ ಪ್ರೀತಿಗೆ ಹಂಬಲಿಸುವವನು. ಆದರೆ.. ಅವರಿಬ್ಬರ ಮಧ್ಯೆ ಪ್ರೀತಿಯೋ.. ದ್ವೇಷವೋ.. ಏನೋ ಒಂದು ಆಗಿದೆ. ಇಬ್ಬರೂ ಸೇಡಿಗೆ ಬಿದ್ದವರಂತೆ ಹೊರಡುತ್ತಾರೆ. ಅವರಿಬ್ಬರ ಮಧ್ಯೆ ಪ್ರೀತಿ-ಸೇಡು-ದ್ವೇಷ ಸರಸರನೆ ಸರಿದಾಡುತ್ತಿರುತ್ತದೆ. ಇಬ್ಬರೂ ಬಳಸೋ ಆಯುಧ ಒಂದೇ. ಅದು ಪ್ರೀತಿ. ರೇಮೋ ಚಿತ್ರದ ಟ್ರೇಲರ್ ನೋಡಿದವರಿಗೆ ಪ್ರೀತಿಯೂ ಅಸ್ತ್ರವಾಗುತ್ತದೆ ಎನ್ನುವುದೇ ಅಚ್ಚರಿ. ಆ ಅಚ್ಚರಿಯನ್ನು ಮೂಡಿಸಿಯೇ ಕುತೂಹಲ ಹುಟ್ಟಿಸುತ್ತಾರೆ ಪವನ್ ಒಡೆಯರ್.
ಇಶಾನ್-ಆಶಿಕಾ ರಂಗನಾಥ್ ಮುದ್ದು ಮುದ್ದಾದ ಜೋಡಿ ಗಮನ ಸೆಳೆಯುತ್ತದೆ. ಅಹಂಕಾರ ತೋರಿಸುವಲ್ಲಿ, ಫೈಟುಗಳಲ್ಲಿ, ಪ್ರೀತಿಗಾಗಿ ಹಂಬಲಿಸುವಲ್ಲಿ.. ಇಶಾನ್ ಗಮನ ಸೆಳೆದರೆ ಮುಗ್ಧತೆಯಿಂದ, ಪ್ರೀತಿಗಾಗಿ ಸೇಡಿಗಾಗಿ ಹಂಬಲಿಸುವ ಹುಡುಗಿಯಾಗಿ ಕಣ್ಣುಗಳಲ್ಲೇ ಕಿಚ್ಚು ಹಚ್ಚುತ್ತಾರೆ ಆಶಿಕಾ ರಂಗನಾಥ್.
ಅರ್ಜುನ್ ಜನ್ಯಾ ಮ್ಯೂಸಿಕ್ ಮತ್ತೊಂದು ಮೆರವಣಿಗೆ ಹೊರಟಿರುವ ಸೂಚನೆ ಇದೆ. ಸಿ.ಆರ್. ಮನೋಹರ್ ನಿರ್ಮಾಣದ ಚಿತ್ರ ನವೆಂಬರ್ 25ಕ್ಕೆ ಬಿಡುಗಡೆಯಾಗುತ್ತಿದೆ. ಶಿವಣ್ಣ ಟ್ರೇಲರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.