ಸತತ 6ನೇ ವಾರವೂ ಕಾಂತಾರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇಷ್ಟೊಂದು ದೊಡ್ಡ ಮಟ್ಟದ ಕ್ರೇಜ್ ಹಿಂದೆಂದು ಸೃಷ್ಟಿಯಾಗಿದ್ದಿಲ್ಲ. ಈಗ 300 ಕೋಟಿಯ ಗಡಿಯನ್ನೂ ದಾಟಿರುವ ಕಾಂತಾರ 31ನೇ ದಿನಕ್ಕೆ 305 ಕೋಟಿ ಬ್ಯುಸಿನೆಸ್ ಮಾಡಿದೆ. ಸೆಪ್ಟೆಂಬರ್ 30ರಂದು ರಿಲೀಸ್ ಆದ ಚಿತ್ರಕ್ಕೆ ದಸರಾ ಹಬ್ಬದ ಓಪನಿಂಗ್ ಸಿಕ್ಕಿತ್ತು. ಆಯುಧಪೂಜೆ, ವಿಜಯದಶಮಿ, ಗಾಂಧಿ ಜಯಂತಿ, ದೀಪಾವಳಿ ಸೇರಿದಂತೆ ಸಾಲು ಸಾಲು ರಜೆಗಳಲ್ಲಿ ಪ್ರೇಕ್ಷಕರು ಚಿತ್ರ ನೋಡಲು ಮುಗಿಬಿದ್ದರು. ಈಗ ನೋಡಿದರೆ 300 ಕೋಟಿಯನ್ನೂ ದಾಟಿ ದಾಖಲೆ ಬರೆದಿದೆ.
ಕೆಜಿಎಫ್ ಚಾಪ್ಟರ್ 2 ನಂತರ ಕಾಂತಾರ ನಂ.2 ಸಿನಿಮಾ ಎನ್ನಿಸಿಕೊಂಡಿದೆ. ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಸಿನಿಮಾದ ಪಂಜುರ್ಲಿ ದೈವ ಹಾಗೂ ಗುಳಿಗ ಈಗ ಮನೆ ಮನೆ ಮಾತು. ಶಿವ-ಲೀಲಾ ರೊಮ್ಯಾನ್ಸ್‍ಗೆ ಕಚಗುಳಿಯಿಟ್ಟುಕೊಂಡವರಷ್ಟೋ.. ಚಿತ್ರದ ಒಂದೊಂದು ಪಾತ್ರ ಸನ್ನಿವೇಶವನ್ನೂ ಜನ ಎಂಜಾಯ್ ಮಾಡುತ್ತಿದ್ದಾರೆ.
ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಶ್ರೀಶ್ರೀಶ್ರೀ ರವಿಶಂಕರ್, ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್, ಕೈಗಾರಿಕಾ ಸಚಿವ ಪಿಯೂಷ್ ಗೋಯಲ್, ಸೂಪರ್ ಸ್ಟಾರ್ ರಜನಿಕಾಂತ್, ಕ್ರಿಕೆಟ್ ಆಟಗಾರ ಎಬಿ ಡೆವಿಲಿಯರ್ಸ್, ಅನಿಲ್ ಕುಂಬ್ಳೆ.. ಹೀಗೆ ಸಿನಿಮಾ ಹೊರತಾದ ದಿಗ್ಗಜರೂ ನೋಡಿ ಮೆಚ್ಚಿದ ಸಿನಿಮಾ ಕಾಂತಾರ.
ಕನ್ನಡದಲ್ಲಿಯೇ 160 ಕೋಟಿ ಕಲೆಕ್ಷನ್ ಮಾಡಿದ್ದು, ತೆಲುಗು ಹಾಗೂ ಹಿಂದಿಯಲ್ಲಿ 50 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ತಮಿಳು, ಮಲಯಾಳಂನಲ್ಲೂ ಉತ್ತಮ ಪ್ರದರ್ಶನ ಕಾಣುತ್ತಿದೆ. ಹೊಂಬಾಳೆ ಮತ್ತೊಂದು ದಾಖಲೆ ಸೃಷ್ಟಿಸಿದೆ.