ಮೋಹಕತಾರೆ ವಾಪಸ್ ಬರುತ್ತಿರುವುದು ಗೊತ್ತಾಗುತ್ತಿದ್ದಂತೆ ಹುಡುಗರ ಎದೆಯಲ್ಲಿ ಏನೇನೋ ಸಂಚಲನ. ಅದರ ಎಫೆಕ್ಟು ಈಗ ಅವರ ಮನೆಯೆದರೇ ಆಗಿದೆ. ಇತ್ತೀಚೆಗಷ್ಟೇ ನಿರ್ಮಾಪಕಿಯಾಗಿ ಎಂಟ್ರಿ ಕೊಟ್ಟು ಝಲಕ್ ತೋರಿಸಿದ್ದ ರಮ್ಯಾ, ಸ್ವಾತಿ ಮುತ್ತಿನ ಮಳೆ ಹನಿಯಲ್ಲಿ ನಟಿಸುವ ಆಸೆಪೀಸೆ ಮಾಡಿದ್ದರು. ಈಗ ಡಾಲಿ ಧನಂಜಯ್ ಜೊತೆ ನಟಿಸುತ್ತಿದ್ದಾರೆ ಅನ್ನೋ ಸುದ್ದಿಯಿದೆ. ಇದರ ಮಧ್ಯೆ ಹಾಸ್ಟೆಲ್ ಹುಡುಗರು ರಮ್ಯಾ ಮನೆಯೆದುರು ಅವಾಂತರವನ್ನೇ ಸೃಷ್ಟಿಸಿದ್ದಾರೆ.
ರಮ್ಯಾ ಮನೆ ಮುಂದೆ ರಣಭೀಕರ ಪ್ರತಿಭಟನೆ ನಡೆಸುತ್ತಾರೆ ಹಾಸ್ಟೆಲ್ ಹುಡುಗರು. ರಕ್ತದ ಹನಿಹನಿಯನ್ನೂ ದಾನ ಮಾಡೋಕೆ ಬರೋ ಫ್ಯಾನು, ರಮ್ಯಾ ವಿಗ್ರಹಕ್ಕೆ ಅರ್ಚನೆ, ಪೂಜೆ ಮಾಡುತ್ತಿರುವ ಅಭಿಮಾನಿ, ಕೈ, ತಲೆ ಕತ್ತರಿಸಿಕೊಳ್ಳೋ ಅಭಿಮಾನಿ, ಮೈತುಂಬಾ ಚಿನ್ನದ ಸರ ಹೇರಿಕೊಂಡು ಬರೋ ಪ್ರೊಡ್ಯೂಸರ್.. ಅವರೆಲ್ಲರ ಡಿಮ್ಯಾಂಡ್ ಒಂದೇ. ನ್ಯೂಸ್ ಚಾನೆಲ್ಲುಗಳಲ್ಲಿ ಗುಲ್ಲೆಬ್ಬಿಸೋ ಬ್ರೇಕಿಂಗ್ ನ್ಯೂಸ್. ರಮ್ಯಾ ಅವರ ಚಿತ್ರದಲ್ಲಿ ನಟಿಸಬೇಕು ಅನ್ನೋದು. ರಮ್ಯಾ ನಟಿಸುತ್ತಾರೆ. ಸಂಭಾವನೆಯನ್ನು ಕೂಡಾ ಕೊಡ್ತಾರೆ. ಮುಂದಾ..
ರಿಯಲ್ ಅಲ್ಲಲ್ಲಲ್ಲ.. ಹಾಸ್ಟೆಲ್ ಹುಡುಗರು ಚಿತ್ರದ ಕ್ವಾಟ್ಲೆ ಪ್ರೋಮೋಗಾಗಿ ಮಾಡಿರೋ ಪ್ರಚಾರದ ಸ್ಟಂಟು.
ನಿತಿನ್ ಕೃಷ್ಣಮೂರ್ತಿ ನಿರ್ದೇಶದನ ಸಿನಿಮಾ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ. ವರುಣ್ ಗೌಡ, ಪ್ರಜ್ವಲ್ ಗೌಡ.. ಮೊದಲಾದವರ ಚಿತ್ರವಿದು. ಗೆಳೆಯರೆಲ್ಲ ಒಟ್ಟುಗೂಡಿ ಮಾಡಿರೋ ಸಿನಿಮಾದಲ್ಲಿ ರಮ್ಯಾ ಒಬ್ಬರೇ ಅಲ್ಲ, ರಿಷಬ್ ಶೆಟ್ಟಿ, ಪವನ್ ಕುಮಾರ್, ಶೈನ್ ಶೆಟ್ಟಿ ಕೂಡಾ ಇದ್ದಾರೆ. ಪುನೀತ್ ರಾಜಕುಮಾರ್ ಅವರಿಗೂ ಇಂತಹುದ್ದೇ ಚಮಕ್ ಕೊಟ್ಟು ಪೋಸ್ಟರ್ ರಿಲೀಸ್ ಮಾಡಿತ್ತು ಚಿತ್ರತಂಡ. ಈಗ ರಮ್ಯಾಗೆ ಸಂಭಾವನೆ ಕೊಡದೆ ಚಮಕ್ ಕೊಟ್ಟಿದೆ.