` ವರಾಹರೂಪಂ.. : ಹಾಡು ಬಳಸದಂತೆ ಕೋರ್ಟ್ ಆದೇಶ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ವರಾಹರೂಪಂ.. : ಹಾಡು ಬಳಸದಂತೆ ಕೋರ್ಟ್ ಆದೇಶ
Kantara Movie Image

ಕಾಂತಾರ ಚಿತ್ರ ಹಿಟ್ ಅಗುತ್ತಿದ್ದಂತೆಯೇ ಕಾಂತಾರದ ವರಾಹರೂಪಂ ಹಾಡು ಕೂಡಾ ಹಿಟ್ ಆಗಿತ್ತು. ಇಡೀ ಸಿನಿಮಾಗೆ ಆ ಹಾಡು, ಸಂಗೀತದಿಂದ ದೈವೀಕ ಕಳೆ ಬಂದಿತ್ತು. ಅಜನೀಶ್ ಲೋಕನಾಥ್ ವ್ಹಾವ್ ಎನ್ನಿಸಿಕೊಂಡಿದ್ದರು. ಆದರೆ ಈಗ ಆ ಹಾಡಿಗೆ ತಡೆ ನೀಡಿದ ನ್ಯಾಯಾಲಯ. ಇದೀಗ ‘ತೈಕ್ಕುಡಂ ಬ್ರಿಡ್ಜ್’ ಮ್ಯೂಸಿಕ್ ಬ್ಯಾಂಡ್ನ ಅನುಮತಿ ಇಲ್ಲದೆ ‘ವರಾಹ ರೂಪಂ’ ಹಾಡನ್ನ ಬಳಕೆ ಮಾಡುವಂತಿಲ್ಲ ಎಂದು ಕೇರಳ ಕೋರ್ಟ್ ಆದೇಶ ನೀಡಿದೆ.

‘ತೈಕ್ಕುಡಂ ಬ್ರಿಡ್ಜ್’ ಎಂಬ ಮ್ಯೂಸಿಕ್ ಬ್ಯಾಂಡ್ನ ಅನುಮತಿ ಇಲ್ಲದೆ ‘ವರಾಹ ರೂಪಂ’ ಹಾಡನ್ನ ಬಳಕೆ ಮಾಡದಂತೆ ‘ಕಾಂತಾರ’ ಚಿತ್ರತಂಡಕ್ಕೆ ಕೇರಳದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಇಂದು ಆದೇಶ ನೀಡಿದೆ. ‘ಕಾಂತಾರ’ ಚಿತ್ರದಲ್ಲಿ ಬಳಸಲಾದ ವರಾಹ ರೂಪಂ..  ತಮ್ಮ ಒರಿಜಿನಲ್ ಸಾಂಗ್ ನವರಸಂನಿಂದ ಯಥಾವತ್ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿ ‘ತೈಕ್ಕುಡಂ ಬ್ರಿಡ್ಜ್’ ಮ್ಯೂಸಿಕ್ ಬ್ಯಾಂಡ್ ಕೋರ್ಟ್ ಮೆಟ್ಟಿಲೇರಿತ್ತು.ಕೋರ್ಟ್ ತೈಕ್ಕುಡಂ ಬ್ರಿಡ್ಜ್ ಮನವಿಗೆ ಸ್ಪಂದಿಸಿ ಅವರ ಪರವಾಗಿಯೇ ತೀರ್ಪು ಕೊಟ್ಟಿದೆ.

ರಾಗಗಳು ಒಂದೇ ಹೊರತು ಕಾಪಿ ಮಾಡಿದ್ದಲ್ಲ. ಹಾಗಾಗಿ  ಈ ರೀತಿ ಅನ್ನಿಸುವುದು ಸಹಜ ಎಂದಿದ್ದರು ಅಜನೀಶ್ ಲೋಕನಾಥ್. ನಿರ್ದೇಶಕ ರಿಷಬ್ ಶೆಟ್ಟಿ ಕೂಡಾ ಹಾಡು ಕಾಪಿ ಮಾಡಿದ್ದಲ್ಲ. ನ್ಯಾಯಾಂಗ ಹೋರಾಟ ನಡೆಸುತ್ತೇವೆ ಎಂದಿದ್ದರು. ಈಗ ಕೋರ್ಟ್ ತಡೆಯಾಜ್ಞೆ ನೀಡಿದೆ.

ಕೊಲಿಕ್ಕೋಡ್‍ನ ಜಿಲ್ಲಾ ನ್ಯಾಯಾಲಯದ ಆದೇಶದ ಪ್ರಕಾರ ನಿರ್ಮಾಪಕರು, ನಿರ್ದೇಶಕರು, ಸಂಗೀತ ನಿರ್ದೇಶಕರು, ಅಮೇಜಾನ್, ಯೂಟ್ಯೂಬ್, ಸ್ಫೂಫಿ, ವಿಂಕ್ ಮ್ಯೂಸಿಕ್, ಜಿಸೋವಾನ್ ಸೇರಿದಂತೆ ಎಲ್ಲರಿಗೂ ಅನ್ವಯವಾಗಲಿದೆ. ನವರಸಂ ಹಾಡಿನ ಮೂಲ ಸೃಷ್ಟಿಕರ್ತರಾದ ತೈಕ್ಕುಡಂ ಬ್ರಿಡ್ಜ್ ಅನುಮತಿಯಿಲ್ಲದೆ ಹಾಡನ್ನು ಬಳಸುವಂತಿಲ್ಲ ಎಂಂದು ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ತೈಕ್ಕುಡಂ ಬ್ರಿಡ್ಜ್ ಪರವಾಗಿ ಸುಪ್ರೀಂಕೋರ್ಟ್ ವಕೀಲ ಸತೀಶ್ ಮೂರ್ತಿ ವಾದಿಸುತ್ತಿದ್ದಾರೆ.