ಕಾಂತಾರ 4ನೇ ವಾರದ ಹೊತ್ತಿಗೆ ರಿಲೀಸ್ ಆದ ಸಿನಿಮಾ ಹೆಡ್ ಬುಷ್. ಡಾಲಿ ಧನಂಜಯ್ ನಟಿಸಿದ್ದಷ್ಟೇ ಅಲ್ಲ, ನಿರ್ಮಾಪಕರೂ ಅವರೇ. ಕಾಂತಾರ ಸಿನಿಮಾ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದ್ದರೆ ಹೆಡ್ ಬುಷ್ ಸಿನಿಮಾ ಬಾಕ್ಸಾಫೀಸ್‍ನಲ್ಲಿ ಬೇರೆಯದೇ ತೆರನಾದ ಹವಾ ಎಬ್ಬಿಸಿದೆ. ಏಕೆಂದರೆ ಇದು ರೌಡಿಸಂ ಸಿನಿಮಾ. ಹೆಡ್ ಬುಷ್ ಬೆಂಗಳೂರಿನ ಮೊದಲ ಡಾನ್ ಜೈರಾಜ್ ಬಯೋಪಿಕ್. ಅಗ್ನಿ ಶ್ರೀಧರ್ ಚಿತ್ರಕಥೆ ಸಂಭಾಷಣೆ ಬರೆದಿರುವ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವುದು ಶೂನ್ಯ. ಡಾಲಿ, ಯೋಗಿ, ವಸಿಷ್ಠ ಸಿಂಹ ಎಲ್ಲರೂ ಅದ್ಭುತವಾಗಿ ನಟಿಸಿದ್ದು ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಮಧ್ಯೆ ಡಾಲಿ ಧನಂಜಯ್ ಕಾಂತಾರ ನೋಡಿದ್ದಾರೆ.
ಕಾಂತಾರ ನಿಜವಾಗಿಯೂ ಕನ್ನಡದ ಹೆಮ್ಮೆ. ಗೆಳೆಯ ರಿಷಬ್ ಶೆಟ್ಟಿ ಒಳಗಿರುವ ನಟ, ಅದ್ಭುತ ಬರಹಗಾರ, ನಿರ್ದೇಶಕನಿಗೆ ಬೆರಗಾದೆ. ಅಭಿಮಾನಿಯಾದೆ. ಸಪ್ತಮಿ ಗೌಡ ಅವರ ಮುಗ್ಧತೆ ಹಾಗೂ ಅಭಿನಯ ಇಷ್ಟವಾಯಿತು ಎಂದಿದ್ದಾರೆ. ಅಂದಹಾಗೆ ಸಪ್ತಮಿ ಗೌಡ ಮೊದಲ ಚಿತ್ರ ಡಾಲಿ ಎದುರು ನಟಿಸಿದ್ದ ಪಾಪ್ ಕಾನ್ರ್ಸ್ ಮಂಕಿ ಟೈಗರ್. ಕಾಂತಾರ ಬಿಡುಗಡೆಯಾದ ದಿನದಿಂದಲೂ ಹೆಡ್ ಬುಷ್ ಚಿತ್ರದ ಬಿಡುಗಡೆ ಕೆಲಸದಲ್ಲಿದ್ದೆ. ಹೀಗಾಗಿ ನೋಡೋಕೆ ಆಗಿರಲಿಲ್ಲ ಎಂದಿದ್ದಾರೆ ಡಾಲಿ.
ಇಂತಹ ಕಥೆಗಳನ್ನು ಹುಡುಕಿ ಸಿನಿಮಾ ಮಾಡುತ್ತಿರುವ ಹೊಂಬಾಳೆಗೂ ತಮ್ಮ ಅಭಿನಂದನೆ ತಿಳಿಸಿದ್ದಾರೆ. ಕಾಂತಾರ ಈಗಾಗಲೇ ಹೊಸ ದಾಖಲೆ ಬರೆಯುತ್ತಿದ್ದು ಕೆಜಿಎಫ್ 2 ದಾಖಲೆಯನ್ನೂ ಅಳಿಸಿಹಾಕಿದೆ. ಕೆಜಿಎಫ್ ಚಾಪ್ಟರ್ 2 ಚಿತ್ರ ಕನ್ನಡದಲ್ಲಿ ಅತೀ ಹೆಚ್ಚು ಜನ ನೋಡಿದ ಸಿನಿಮಾ ಎಂಬ ದಾಖಲೆ ಬರೆದಿತ್ತು. 75 ಲಕ್ಷ ಜನ ಕೆಜಿಎಫ್ ನೋಡಿದ್ದರು. ಅದನ್ನೂ ಮೀರಿಸಿ 77 ಲಕ್ಷ ವೀಕ್ಷಕರು ಕಾಂತಾರಕ್ಕೆ ಬಂದಿದ್ದಾರೆ. ದೇಶದ ಎಲ್ಲ ಚಿತ್ರರಂಗದ ದಿಗ್ಗಜರೂ ಕಾಂತಾರ ಸಿನಿಮಾ ನೋಡಿ ಮೆಚ್ಚಿದ್ದಾರೆ. ಈ ಮಧ್ಯೆ ಹೆಡ್ ಬುಷ್ ಕೂಡಾ ಉತ್ತಮ ಪ್ರದರ್ಶನ ಕಾಣುತ್ತಿದ್ದು, 2ನೇ ಸಿನಿಮಾದಲ್ಲೂ ಡಾಲಿ ಗೆದ್ದಿದ್ದಾರೆ.