ಪುನೀತ್ ರಾಜ್ ಕುಮಾರ್ ಕನ್ನಡಿಗರ ಹೃದಯದಲ್ಲಿ ಎಂದಿಗೂ ಚಿರಸ್ಥಾಯಿ. ಪರಿಸರ ಕಾಳಜಿಯಿಂದ ನಿರ್ಮಿಸಿದ ಗಂಧದ ಗುಡಿಗೆ ಎಲ್ಲ ರೀತಿಯ ಟ್ಯಾಕ್ಸ್ ಫ್ರೀ ಮಾಡುತ್ತಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ..
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಕಡೆಯ ಸಿನಿಮಾ ಗಂಧದ ಗುಡಿ ಅಕ್ಟೋಬರ್ 28 ರಂದು ಬಿಡುಗಡೆಯಾಗಲಿದೆ. ಪುನೀತ ಪರ್ವ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗಂಧದ ಗುಡಿ ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸಿದ್ದಾರೆ.
ಇಂತಹದ್ದನ್ನೆಲ್ಲ ಅಪ್ಪು ಮಾತ್ರ ಮಾಡೋಕೆ ಸಾಧ್ಯ. ನಿಸರ್ಗದ ಬಗ್ಗೆ ಪ್ರಕೃತಿ ಕುರಿತು ಜಾಗೃತಿ ಮೂಡಿಸುವುದು ಇಂದಿನ ಅತ್ಯಗತ್ಯ ಅನಿವಾರ್ಯತೆ. ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಪುನೀತ್ ಗಂಧದ ಗುಡಿಯಲ್ಲಿ ಮಾಡಿದ್ದಾರೆ ಎಂದು ಹೊಗಳಿದರು ಬೊಮ್ಮಾಯಿ.
ಗಂಧದ ಗುಡಿ ಚಿತ್ರಕ್ಕಾಗಿ ಪುನೀತ್ ಕಾಡು ಮೇಡು ಸುತ್ತಿದ್ದಾರೆ. ನಿರ್ದೇಶಕ ಅಮೋಘವರ್ಷ ಅವರೊಂದಿಗೆ ಇಡೀ ಕರುನಾಡಿನ ಪ್ರಕೃತಿ ಹಾಗೂ ವನ್ಯಜೀವಿಗಳನ್ನು ಪರಿಚಯಿಸುವ ಕೆಲಸ ಮಾಡಿದ್ದಾರೆ. ಇದೊಂದು ವಿಶೇಷ ಪ್ರಯೋಗವೂ ಹೌದು. ಸಚಿನ್ ತೆಂಡೂಲ್ಕರ್ ಕುರಿತ ಡಾಕ್ಯುಮೆಂಟರಿ ಬಿಟ್ಟರೆ ಮಿಕ್ಕಾವ ಡಾಕ್ಯುಮೆಂಟರಿಯೂ ಸಿನಿಮಾ ರೀತಿ ಥಿಯೇಟರಿಗೆ ಬಿಡುಗಡೆಯಾಗಿಲ್ಲ. ಅಂತಹದ್ದೊಂದು ವಿಶೇಷ ಪ್ರಯೋಗ ಮಾಡಲು ಹೊರಟಿದ್ದರು ಪುನೀತ್. ಪುನೀತ್ ಅವರ ಆ ಕನಸನ್ನು ನನಸು ಮಾಡಲು ಹೊರಟಿದ್ದಾರೆ ಅಶ್ವಿನಿ ಪುನೀತ್ ರಾಜ್‍ಕುಮಾರ್. ಅಶ್ವಿನಿ ಅವರೊಂದಿಗೆ ಇಡೀ ಕರುನಾಡಿನ ಚಿತ್ರರಂಗವೇ ನಿಂತಿದ್ದು ಇದೇ 28ರಂದು ರಿಲೀಸ್ ಆಗುತ್ತಿದೆ.
ಸಾಕ್ಷ್ಯಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದು 4 ಹಾಡುಗಳೂ ಇವೆ. ಡಾ.ರಾಜ್ ಕುಮಾರ್ ಅವರ ಗಂಧದ ಗುಡಿಯ ನಾವಾಡುವ ನುಡಿಯೇ ಕನ್ನಡ ನುಡಿ ಹಾಡನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಇದರ ಜೊತೆಗೆ ಇನ್ನೂ 3 ಹಾಡುಗಳಿವೆ. ಸಾಹಿತ್ಯ ಸಂತೋಷ್ ಆನಂದರಾಮ್ ಅವರದ್ದು.