ಆ ದಿನಗಳು ಖ್ಯಾತಿಯ ನಟ ಚೇತನ್ ಕಾಂತಾರ ಚಿತ್ರದ ಬಗ್ಗೆ ವಿವಾದಾತ್ಮಕವಾಗಿ ಮಾತನಾಡಿ ಸುದ್ದಿಯಲ್ಲಿದ್ದಾರೆ. ಭೂತಕೋಲ, ದೈವಾರಾಧನೆ ಇವ್ಯಾವುವೂ ಹಿಂದೂಗಳದ್ದಲ್ಲ. ನಮ್ಮ ಬುಡಕಟ್ಟು ಸಂಸ್ಕøತಿಯದ್ದು. ಹಿಂದೂಗಳೇ ಬೇರೆ. ಬುಡಕಟ್ಟು ಜನಗಳೇ ಬೇರೆ. ವೈದಿಕತೆ, ಬ್ರಾಹ್ಮಣ್ಯವನ್ನು ಕಾಂತಾರ ಚಿತ್ರದ ಮೂಲಕ ಹೇರಲಾಗುತ್ತಿದೆ ಎಂದಿದ್ದರು ಚೇತನ್. ನಟ ನಿರ್ದೇಶಕ ರಿಷಬ್ ಶೆಟ್ಟಿ ಸಂಸ್ಕøತಿ ಆರಾಧಿಸುವವರಿಗೆ ಮಾತ್ರವೇ ಇದರ ಬಗ್ಗೆ ಮಾತನಾಡಲು ಹಕ್ಕಿದೆ. ಚೇತನ್ ಹೇಳಿಕೆಗೆ ನೋ ಕಮೆಂಟ್ಸ್ ಎಂದಿದ್ದರು. ವಿವಾದಾತ್ಮಕ ಹೇಳಿಕೆ ಬಗ್ಗೆ ಚಿತ್ರರಂಗದ ಖ್ಯಾತನಾಮರು, ರಾಜಕಾರಣಿಗಳೂ ಮಾತನಾಡಿದ್ದಾರೆ. ಚೇತನ್ ನಡವಳಿಕೆಯನ್ನು ಖಂಡಿಸಿದ್ದಾರೆ. ಈ ಮಧ್ಯೆ ಚೇತನ್ ವಿರುದ್ಧ ಪೊಲೀಸ್ ಕೇಸ್ ಕೂಡಾ ದಾಖಲಾಗಿದೆ. ಆದರೆ ಇದಕ್ಕೆಲ್ಲ ಚೇತನ್ ಬಗ್ಗುವವರೂ ಅಲ್ಲ. ಹೀಗಾಗಿಯೇ ಚೇತನ್ ಮತ್ತೊಮ್ಮೆ ಮಾತನಾಡಿದ್ದಾರೆ.
ಹಿಂದೂ ಧರ್ಮವನ್ನು ಆಮದು ಮಾಡಿಕೊಂಡ ಧರ್ಮ ಎಂದಿದ್ದಾರೆ. ಈ ಬಾರಿ ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮವನ್ನೂ ಆಮದು ಮಾಡಿಕೊಂಡ ಧರ್ಮ ಎಂದಿದ್ದಾರೆ. ಈ ಬಗ್ಗೆ ರಿಯಲ್ ಸ್ಟಾರ್ ಉಪೇಂದ್ರ ಕಾಂತಾರ ಸಿನಿಮಾ ನೋಡಿಲ್ಲ. ಚಿತ್ರ ನೋಡಿ ರಿಯಾಕ್ಟ್ ಮಾಡ್ತೀನಿ. ಎಲ್ಲರೂ ಸಿನಿಮಾದ ಬಗ್ಗೆ ಒಳ್ಳೆಯ ಅಭಿಪ್ರಾಯ ಹೇಳಿದ್ದಾರೆ. ಚಿತ್ರೀಕರಣದ ಮಧ್ಯೆ ಬಿಡುವಾಗಿಲ್ಲ. ಇನ್ನು ಚೇತನ್ ವಿವಾದದ ಬಗ್ಗೆ ಮಾತನಾಡಿರೋ ಉಪೇಂದ್ರ ಬೆಂಕಿಗೆ ತುಪ್ಪ ಸುರಿಯೋ ಕೆಲಸ ಮಾಡಲ್ಲ. ಈ ರೀತಿಯ ಬೆಳವಣಿಗೆ ಅಸಹ್ಯ ತರಿಸುತ್ತೆ. ಭೂತಾರಾಧನೆ ಅವರ ವೈಯಕ್ತಿಕ ನಂಬಿಕೆ. ನಾನೂ ಅದೇ ಊರಿಂದ ಬಂದವನು. ನಾವು ನಾಗಾರಾಧನೆ ಮಾಡುತ್ತೇವೆ. ಇದನ್ನು ನಿರ್ಲಕ್ಷಿಸುವುದೇ ಒಳ್ಳೆಯದು ಎಂದಿದ್ದಾರೆ ಉಪೇಂದ್ರ. ಆದರೆ ದೈವಾರಾಧಕರು ಸುಮ್ಮನಾಗಿಲ್ಲ.
ಉಡುಪಿಯಲ್ಲಿ ಹಿರಿಯ ದೈವರಾಧಕ ಕುಮಾರ ಪಂಪದ ಮಾತನಾಡಿ, ಸಂಸ್ಕೃತಿಯ ಅವಹೇಳನ ಆದಾಗೆಲ್ಲ ನಾವು ದೈವದ ಮುಂದೆ ಪ್ರಾರ್ಥನೆ ಮಾಡುತ್ತೇವೆ. ನಾವು ಸೇವೆ ಕೊಡುವ ದೈವಗಳ ಮುಂದೆಯೇ ಪ್ರಾರ್ಥನೆ ಮಾಡುತ್ತೇವೆ. ನಮ್ಮ ಮೂಲ ಆರಾಧನೆಯ ಪಂಜುರ್ಲಿ ದೈವದ ಮುಂದೆ ಈ ಬಗ್ಗೆ ಪ್ರಾರ್ಥನೆ ಸಲ್ಲಿಸುತ್ತೇವೆ ಎಂದಿದ್ದಾರೆ.
ನಟರಿಗೆ ನಟನೆ ಮಾಡಲು ಗೊತ್ತಿರಬಹುದು. ನಾವು ದೈವಾರಾಧಕರು. ನಮಗೆ ನಟಿಸಲು ಗೊತ್ತಿಲ್ಲ. ನಾವು ತಲೆತಲಾಂತರಗಳಿಂದ ಸತ್ಯವನ್ನು ಪಾಲನೆ ಮಾಡಿಕೊಂಡು ಬಂದವರು. ಭೂತಾರಾಧನೆಗೆ ಇಂತಿಷ್ಟು ವರ್ಷದ ಹಿನ್ನೆಲೆ ಎಂಬ ದಾಖಲೆ ನಮ್ಮಲ್ಲಿ ಇಲ್ಲ. ಯಾವುದೋ ಒಂದು ಪುಸ್ತಕ ಹಿಡಿದುಕೊಂಡು ಮಾತನಾಡುವುದು ತಪ್ಪು ಎಂದು ಗರಂ ಆದರು. ಕರಾವಳಿಯಾದ್ಯಂತ ಪರವ, ಪಂಪದ ನಲಿಕೆಯವರು ಜೀವಿಸುತ್ತಿದ್ದೇವೆ. ನಾವು ಅಲೆಮಾರಿಗಳು ಎಂಬ ಮಾತನ್ನು ಒಪ್ಪಲು ಸಾಧ್ಯವಿಲ್ಲ. ನಮ್ಮ ಹಿರಿಯರ ಕಾಲದಿಂದ ನಾವು ಹಿಂದೂ ಸಂಪ್ರದಾಯವನ್ನು ಆರಾಧನೆ ಮಾಡಿಕೊಂಡು ಬರುತ್ತಿದ್ದೇವೆ. ನಮ್ಮ ದೈವಗಳಿಗೆ ಮೂಲ ಶಬ್ದವೇ ತುಳು. ನಾವು ನಂಬಿಕೊಂಡ ಸತ್ಯದ ಮೂಲಕ ಚೇತನ್ ಗೆ ಪ್ರತಿಕ್ರಿಯೆ ಕೊಡುತ್ತೇವೆ ಎಂದು ಹೇಳಿದರು.
ನಟ ಚೇತನ್ ಬಹಳ ದೊಡ್ಡ ಜ್ಞಾನಿ ಆಗಿರಬಹುದು. ನಮ್ಮ ನೆಲ, ನಮ್ಮ ಕುಲ ನಮ್ಮ ಆಚರಣೆಯ ಬಗ್ಗೆ ಮಾತನಾಡುವ ಜ್ಞಾನ ಇವರಿಗೆ ಇಲ್ಲ. ವ್ಯಕ್ತಿಗತವಾಗಿ ಇವರಿಗೆ ನಾವು ಉತ್ತರ ಕೊಡುವುದಿಲ್ಲ ಎಂದು ಆಕ್ರೋಶ ಹೊರಹಾಕಿದರು.