ಹೆಡ್ ಬುಷ್ ನಾಳೆ ರಿಲೀಸ್. ಅಂಡರ್ವಲ್ರ್ಡ್ ಕಥೆ ಆಧರಿಸಿದ ಚಿತ್ರವಿದು. ಬೆಂಗಳೂರಿನ ಮೊದಲ ಡಾನ್ ಜೈರಾಜ್ ಬಯೋಪಿಕ್. ಕೊತ್ವಾಲ, ಗಂಗಾ ಕಥೆಯೂ ಚಿತ್ರದಲ್ಲಿ ಬರುತ್ತೆ. ಚಿತ್ರದ ಚಿತ್ರಕಥೆ ಸಂಭಾಷಣೆ ಮಾಜಿ ಡಾನ್ ಅಗ್ನಿ ಶ್ರೀಧರ್ ಅವರದ್ದಾಗಿರುವುದರಿಂದ ರಿಯಾಲಿಟಿಗೆ ಹತ್ತಿರದಲ್ಲಿಯೇ ಇರುತ್ತೆ. ಡಾಲಿ ಧನಂಜಯ್ ನಿರ್ಮಾಣದ 2ನೇ ಚಿತ್ರವಿದು. ಮೊದಲ ಚಿತ್ರ ಬಡವ ರಾಸ್ಕಲ್ ಚಿತ್ರದಲ್ಲಿ ಭರ್ಜರಿಯಾಗಿ ಗೆದ್ದಿದ್ದ ಡಾಲಿ 2ನೇ ಸಿನಿಮಾ ಹೆಡ್ ಬುಷ್ ಸಿನಿಮಾದಲ್ಲೂ ಗೆಲುವಿನ ಮೊದಲ ಸೂಚನೆ ಕೊಟ್ಟಿದ್ದಾರೆ. ಶೂನ್ಯ ನಿರ್ದೇಶನದ ಮೊದಲ ಚಿತ್ರವೇ 2 ಭಾಗಗಳಲ್ಲಿ ಬರುತ್ತಿದ್ದು ಚಿತ್ರ ಬಿಡುಗಡೆಗೂ ಮುನ್ನವೇ ಕೋಟಿ ಕೋಟಿ ಬಾಚಿದೆ.
ಡಾಲಿ ಜೊತೆ ಚಿತ್ರದಲ್ಲಿ ವಸಿಷ್ಠ ಸಿಂಹ ಕೊತ್ವಾಲನಾಗಿ, ಲೂಸ್ ಮಾದ ಗಂಗ ಪಾತ್ರದಲ್ಲಿ ನಟಿಸಿದ್ದಾರೆ. ರಘು ಮುಖರ್ಜಿ, ದೇವರಾಜ್, ಶ್ರುತಿ ಹರಿಹರನ್, ಪಾಯಲ್ ರಜಪೂತ್.. ಮೊದಲಾದವರು ನಟಿಸಿರೋ ಚಿತ್ರದ ಹಬೀಬಿ ಹಾಡು ಈಗಾಗಲೇ ಹೈಲೈಟ್. ನಾಳೆ ರಿಲೀಸ್ ಆಗುತ್ತಿರೋ ಚಿತ್ರವನ್ನು ಝೀಟಿವಿ ಕೊಂಡುಕೊಂಡಿದೆ. ಚಿತ್ರದ ಟಿವಿ ರೈಟ್ಸ್, ಸ್ಯಾಟಲೈಟ್ ರೈಟ್ಸ್, ಒಟಿಟಿ ರೈಟ್ಸ್, ಹಿಂದಿ ಸೇರಿದಂತೆ ಸಿನಿಮಾ ಬಿಡುಗಡೆಯ ಎಲ್ಲ ಹಕ್ಕುಗಳನ್ನೂ ಝೀಟಿವಿ ಖರೀದಿ ಮಾಡಿದ್ದು 22 ಕೋಟಿ ಬಾಚಿಕೊಂಡಿದೆ. ಡಾಲಿ ಚಿತ್ರಗಳಲ್ಲೇ ಇದು ಸೂಪರ್ ಬಿಗ್ ಬಜೆಟ್ ಸಿನಿಮಾ ಆಗಲಿದೆ.