ಅಪ್ಪು ಅಭಿಮಾನಿಗಳ ಸಂಭ್ರಮದ ಕೊನೆಯ ಹಬ್ಬ ಅಕ್ಟೋಬರ್ 28. ನಡುವೆ ಜೇಮ್ಸ್, ಲಕ್ಕಿಮ್ಯಾನ್ ರಿಲೀಸ್ ಆಗಿದ್ದರೂ ಗಂಧದ ಗುಡಿಯ ಸಂಭ್ರಮವೇ ಬೇರೆ.ಏಕೆಂದರೆ ಇದು ಅಪ್ಪು ಕನಸು. ಕಟ್ಟಕಡೆಯ ಕನಸು. ಕನ್ನಡ ನಾಡಿನ ಸಂಸ್ಕøತಿ, ಪ್ರಕೃತಿ, ವನ್ಯಜೀವಿ ಸಂಪತ್ತನ್ನು ಇಡೀ ಜಗತ್ತಿಗೆ ತೋರಿಸುವ ಕನಸು ಕಂಡಿದ್ದರು ಅಪ್ಪು. ಮಾಡುತ್ತಿರುವುದು ಡಾಕ್ಯುಮೆಂಟರಿಯಾದರೂ ಇದನ್ನು ಥಿಯೇಟರಿನಲ್ಲೇ ಬಿಡುಗಡೆ ಮಾಡುತ್ತೇನೆ ಎಂದು ಹೇಳಿಕೊಂಡೂ ಇದ್ದರು. ಆದರೆ ರಿಲೀಸ್ ಹೊತ್ತಿಗೆ ಅವರೇ ಇಲ್ಲ. ಅಕ್ಟೋಬರ್ 29ಕ್ಕೆ ವರ್ಷವಾಗುತ್ತಿದೆ. ಅದಕ್ಕೆ ಒಂದು ದಿನ ಮುನ್ನ ಗಂಧದ ಗುಡಿ ಬಿಡುಗಡೆಯಾಗುತ್ತಿದೆ.
ಇದು ಡಾಕ್ಯುಮೆಂಟರಿಯಾದರೂ ಯಾವುದೇ ಸಿನಿಮಾಗಿಂತ ಕಡಿಮೆ ಇಲ್ಲ ಎಂದಿದ್ದಾರೆ ಡೈರೆಕ್ಟರ್ ಅಮೋಘವರ್ಷ. ಇದರಲ್ಲಿ ಗಂಧದ ಗುಡಿ ಚಿತ್ರದ ನಾವಾಡುವ ನುಡಿಯೇ ಕನ್ನಡ ನುಡಿ.. ಹಾಡು ಕೂಡಾ ಇರಲಿದೆ. ಪಿ.ಬಿ.ಶ್ರೀನಿವಾಸ್ ಧ್ವನಿಯಲ್ಲಲ್ಲ. ಗಂಧದ ಗುಡಿ 2ರಲ್ಲಿ ಅಣ್ಣಾವ್ರು ಹಾಡಿದ್ದರಲ್ಲ. ಆ ಧ್ವನಿಯಲ್ಲೇ ಇರಲಿದೆ. ಜೊತೆಗೆ ಇನ್ನೂ 3 ಹಾಡುಗಳನ್ನು ಸಂತೋಷ್ ಆನಂದರಾಮ್ ಬರೆದಿದ್ದಾರೆ. ಒಟ್ಟು ನಾಲ್ಕು ಹಾಡುಗಳು. ಇದರ ಜೊತೆಗೆ ಡಾಕ್ಯುಮೆಂಟರಿಯ ಹಿನ್ನೆಲೆ ಹಾಗೂ ಅಪ್ಪು ಕನಸಿನ ಬಗ್ಗೆ ಅಶ್ವಿನಿ ಪುನೀತ್ ರಾಜಕುಮಾರ್ ವಾಯ್ಸ್ ಓವರ್ ಕೂಡಾ ಇರಲಿದೆ.