ಈಗ 20 ಅಥವಾ 30ರ ಹೊಸ್ತಿಲಲ್ಲಿರುವವರಿಗೆ ಇದು ವಿಶೇಷ ಅನ್ನಿಸಬಹುದು. ಏಕೆಂದರೆ ಈ ಜಮಾನಾದ ಹುಡುಗ/ಹುಡುಗಿಯರು ಅಂತಹವನ್ನೆಲ್ಲ ನೋಡಿಯೇ ಇಲ್ಲ. ಆದರೆ ಮರೆತೇಹೋಗಿದ್ದ ಆ ಕಥೆಯನ್ನು, ದೃಶ್ಯವನ್ನ ಮರುಕಳಿಸುವಂತೆ ಮಾಡಿದೆ ಕಾಂತಾರ. ಅದು ನಡೆದಿರುವುದು ಕಾಸರಗೋಡಿನಲ್ಲಿ. ಕಾಸರಗೋಡು ಕೇರಳದಲ್ಲಿದೆಯಾದರೂ ಕನ್ನಡಿಗರೇ ಹೆಚ್ಚು ಇರುವ ಜಿಲ್ಲೆ. ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಕಾಸರಗೋಡು ನಂತರ ರಿಷಬ್ ಶೆಟ್ಟಿ ಕಾಸರಗೋಡಿನವರ ಪಾಲಿಗೆ ನಮ್ಮ ಹುಡುಗನಾಗಿದ್ದಾರೆ. ಈಗ ಅದೇ ಕಾಸರಗೋಡಿನ ಮಂದಿ ರಾಜ್, ವಿಷ್ಣು ಜಮಾನಾ ನೆನಪಿಸಿದ್ದಾರೆ.
ಒಂದು ಕಾಲದಲ್ಲಿ ಡಾ.ರಾಜ್ ಚಿತ್ರಗಳೆಂದರೆ ಊರಿಗೆ ಊರೇ ಗಾಡಿ ಕಟ್ಟಿಕೊಂಡು, ಟ್ರ್ಯಾಕ್ಟರ್ ಮಾಡಿಕೊಂಡು ಸಿನಿಮಾ ನೋಡೋಕೆ ಬರುತ್ತಿದ್ದ ಕಾಲವಿತ್ತು. ಕಿಲೋಮೀಟರುಗಟ್ಟಲೆ ಎತ್ತಿನ ಗಾಡಿಯಲ್ಲಿ, ಟ್ರ್ಯಾಕ್ಟರುಗಳಲ್ಲಿ.. ನಡೆದುಕೊಂಡು ಹೋಗಿ ಸಿನಿಮಾ ನೋಡುತ್ತಿದ್ದರು. ಬಸ್ಗಳ ವ್ಯವಸ್ಥೆಯೂ ಅಷ್ಟಾಗಿ ಇಲ್ಲದೇ ಇದ್ದ ಕಾಲವದು. ವಿಷ್ಣುವರ್ಧನ್ ಚಿತ್ರಗಳಿಗೂ ಟಾಕ್ ಶುರುವಾದ ನಂತರ ಅಂತಹದ್ದೊಂದು ಕ್ರೇಜ್ ಸೃಷ್ಟಿಯಾಗುತ್ತಿತ್ತು. ಆಗ ಟಿವಿಗಳೂ ಮನೆ ಮನೆಯಲ್ಲಿರಲಿಲ್ಲ. ರೇಡಿಯೋ, ಟಿವಿ ಇದ್ದವರೇ ಶ್ರೀಮಂತರು. ಕಂಪ್ಯೂಟರ್ ಅನ್ನೋದು ಲಕ್ಷಾಧಿಪತಿಗಳ ಲಕ್ಷುರಿಯಾಗಿದ್ದ ಕಾಲವದು. ಸೋಷಿಯಲ್ ಮೀಡಿಯಾಗಳೂ ಇರಲಿಲ್ಲ. ಕೇವಲ ಬಾಯಿಮಾತಿನ ಪ್ರಚಾರದಲ್ಲೇ ಸಿನಿಮಾ ಗೆಲ್ಲುತ್ತಿದ್ದ ಕಾಲ. ಡಾ.ರಾಜ್ ಅವರ ಐತಿಹಾಸಿಕ ಹಿಟ್ ಎನ್ನಿಸಿಕೊಂಡ ಬಂಗಾರದ ಮನುಷ್ಯ, ಕಸ್ತೂರಿ ನಿವಾಸ ದಂತಹಾ ಚಿತ್ರಗಳು, ರವಿಚಂದ್ರನ್ರ ಪ್ರೇಮಲೋಕ, ವಿಷ್ಣುವರ್ಧನ್ ಅವರ ಬಂಧನ.. ಮೊದಲಾದ ಚಿತ್ರಗಳು ಓಪನಿಂಗ್ ಡಲ್ಲಾಗಿತ್ತು. ಆಮೇಲೆ ಹಿಟ್ ಆದವು. ಅದನ್ನೀಗ ಕಾಂತಾರ ಮತ್ತೊಮ್ಮೆ ಮಾಡಿದೆ,
ಈಗ ಕಾಸರಗೋಡಿನ ಒಂದೇ ಗ್ರಾಮದ 69 ಜನ ಇಡೀ ಶೋ ಬುಕ್ ಮಾಡಿಕೊಂಡು ಸಿನಿಮಾ ನೋಡಿದ್ದಾರೆ. ಕಾಸರಗೋಡು ಜಿಲ್ಲೆಯ ಬದಿಯಡ್ಕ ಹೋಬಳಿಯ ಕುಂಟಾಲುಮೂಲೆ ಗ್ರಾಮದ 69 ಜನಕ್ಕೆ ಕಾಂತಾರ ಕ್ರೇಜ್ ಗೊತ್ತಾಯ್ತು. ಇಡೀ ಗ್ರಾಮದ 69 ಜನ ಒಟ್ಟಾಗಿ ಸೇರಿ ಬಸ್ ಬುಕ್ ಮಾಡಿಕೊಂಡರು. ಕಾಸರಗೋಡಿನಲ್ಲಿ ಶೋ ಇತ್ತು. ಇಡೀ ಊರಿನ ಜನ ಸಿನಿಮಾ ನೋಡಿ ಖುಷಿಯಾಗಿ ಹೋಗಿದ್ದಾರೆ. ಮಲಯಾಳಂನಲ್ಲೂ ಮತ್ತೊಮ್ಮೆ ಬಂದು ನೋಡುತ್ತೇವೆ ಎಂದಿದ್ದಾರೆ.