ರಮ್ಯಾ ಚಿತ್ರರಂಗದಲ್ಲಿ ನಟಿಸಿ ದಶಕಗಳೇ ಆಗಿವೆ. ವಯಸ್ಸು 40 ದಾಟಿದೆ. ಆದರೆ ಮೋಹಕತಾರೆಯ ಮೇಲಿನ ಕನ್ನಡಿಗರ ಪ್ರೀತಿ ಮಾತ್ರ ಕಮ್ಮಿಯಾಗಿಲ್ಲ. ರಾಜಕೀಯಕ್ಕೆ ಹೋಗಿ ಕಾಂಗ್ರೆಸ್ ಸೇರಿ ಸಂಸದೆಯಾದಾಗ ರಾಜಕೀಯ ಕಾರಣಕ್ಕಾಗಿ ವಿರೋಧಿಸಿದವರಿದ್ದರು. ಆದರೆ ರಮ್ಯಾ ರಮ್ಯಾನೇ. ಅದೇನೇ ವಿವಾದಾತ್ಮಕ ಹೇಳಿಕೆ ನೀಡಿದ್ದರೂ ಸಮರ್ಥನೆಗೆ ಬರುವವರ ಸಂಖ್ಯೆ ಕಡಿಮೆಯೇನಿಲ್ಲ. ಈಗ ಮತ್ತೊಮ್ಮೆ ಚಿತ್ರರಂಗಕ್ಕೆ ವಾಪಸ್ ಆಗುತ್ತಿರುವ ರಮ್ಯಾ ಅವರ ಸ್ಯಾಂಡಲ್‍ವುಡ್ ಕ್ವೀನ್ ಅನ್ನೋ ಬಿರುದು ಇನ್ನೂ ಹಾಗೆಯೇ ಇದೆ. ಅದು ಮತ್ತೊಮ್ಮೆ ಪ್ರೂವ್ ಆಗಿದ್ದು ದಾವಣಗೆರೆಯಲ್ಲಿ.
ದಾವಣಗೆರೆಯಲ್ಲಿ ಭಾನುವಾರ ಹೆಡ್ ಬುಷ್ ಚಿತ್ರದ ಟ್ರೇಲರ್ ರಿಲೀಸ್ ಆಗಿತ್ತು. ಪ್ರೀ-ಈವೆಂಟ್ ಶೋ ಕೂಡಾ ನಡೆದಿತ್ತು. ಆ ಈವೆಂಟ್‍ನ ಮುಖ್ಯ ಆಕರ್ಷಣೆ ದಿವ್ಯ ಸ್ಪಂದನ. ಶೋಗೆ ಬಂದವರಿಗೆ ಹ್ಹೋ.. ಎಂದು ಚಪ್ಪಾಳೆ ತಟ್ಟಿ ಸ್ವಾಗತಿಸಿದರು ರಮ್ಯಾ. ಲಕ್ಕಿ ಹುಡುಗರಿಗೆ ಅಪ್ಪುಗೆಯ ಕಾಣಿಕೆಯೂ ಇತ್ತು. ಇದಾದ ಮೇಲೆ ಹೆಡ್ ಬುಷ್ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ ರಮ್ಯಾ ನಾನು ಇವತ್ತು ಇಲ್ಲೇ ಇರ್ತೇನೆ. ಬರುವಾಗ ಬೆಣ್ಣೆ ದೋಸೆ ತಿನ್ನೋಕೆ ಆಗಲಿಲ್ಲ. ನಾಳೆ ಬೆಣ್ಣೆ ದೋಸೆ ತಿಂದ್ಕೊಂಡೇ ಹೋಗೋದು ಎಂದ್ರು. ಅದರಂತೆಯೇ ರಮ್ಯಾ ಸೋಮವಾರ ಬೆಳಗ್ಗೆ ಬೆಣ್ಣೆ ದೋಸೆ ತಿನ್ನೋಕೆ ಹೋದ್ರು.
ರಮ್ಯಾ ದೋಸೆ ತಿಂತೀವಿ ಅಂದಿದ್ರು ಅಷ್ಟೆ. ಎಲ್ಲಿ ಅನ್ನೋದನ್ನ ಹೇಳಿರಲಿಲ್ಲ. ಆದರೆ ಫ್ಯಾನ್ಸ್ ಟ್ರ್ಯಾಕ್ ಮಾಡ್ತಾನೆ ಇದ್ರು. ಯಾವಾಗ ರಮ್ಯಾ ಕೊಟ್ಟೂರೇಶ್ವರ ಹೋಟೆಲ್‍ಗೆ ಬೆಣ್ಣೆ ದೋಸೆ ತಿನ್ನೋಕೆ ಬಂದಿದ್ದಾರೆ ಅನ್ನೋದು ಗೊತ್ತಾಯ್ತೋ.. ಆಗ ಶುರುವಾಯ್ತು ನೋಡಿ ಅಭಿಮಾನಿಗಳ ದಂಡಯಾತ್ರೆ. ನೂರಾರು ಜನ ಹೋಟೆಲ್‍ನತ್ತ ಓಡಿ ಬಂದರು. ನೂರು ಸಾವಿರವಾಯ್ತು. ಕೊನೆಗೆ ಟ್ರಾಫಿಕ್ ಜಾಮ್ ಆಗುವಂತಾಯ್ತು. ರಮ್ಯಾ ಕ್ರೇಜ್ ಹಾಗಿದೆ.